ವಾಷಿಂಗ್ಟನ್, ಎ.29 (DaijiworldNews/PY): ಕೊರೊನಾ ರೋಗ ತಗುಲಿದರೂ ಕೊರೊನಾ ಲಸಿಕೆ ಹಾಕಿಸಿಕೊಂಡರೆ ಹಿರಿಯರನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಶೇ.94ರಷ್ಟು ಕಡಿಮೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಅಮೇರಿಕಾದ ಫೆಡರಲ್ ಸ್ಟಡಿ ಈ ರೀತಿಯ ವರದಿಯನ್ನು ಬಿಡುಗಡೆ ಮಾಡಿದ್ದು, "ಕೊರೊನಾ ಲಸಿಕೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಇದು ಸೋಂಕು ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಲಸಿಕೆಗಳ ಪರೀಕ್ಷೆಯ ವೇಳೆ ಇದು ದೃಢಪಟ್ಟಿ"ದೆ ಎಂದು ತಿಳಿಸಿದೆ.
ಈ ಅಧ್ಯಯನದಲ್ಲಿ, "ಕೊರೊನಾದ ಎರಡು ಡೋಸ್ಗಳನ್ನು ಪಡೆದ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಲ್ಲಿ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.94ರಷ್ಟು ಕಡಿಮೆ ಇದೆ. ಒಂದು ಡೋಸ್ ಪಡೆದು ಕೊರೊನಾ ಸೋಂಕಿಗೆ ಒಳಗಾದವರ ಪೈಕಿ ಈ ಪ್ರಮಾಣ ಶೇ.64ರಷ್ಟು ಇರುತ್ತದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಹಿರಿಯರಲ್ಲಿ ಕೊರೊನಾ ಸೋಂಕು ಅಲ್ಲದೇ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿರುವುದು ಸಾಮಾನ್ಯ. ಹಾಗಾಗಿ ಇವರಿಗೆ ಸೋಂಕು ತಗುಲಿದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯ. ಅಮೇರಿಕಾದಲ್ಲಿ ಈವರೆಗೆ ಸುಮಾರು 37 ಮಿಲಿಯನ್ ಹಿರಿಯ ವಯಸ್ಕರು ಕೊರೊನಾದ ಎರಡನೇ ಡೋಸ್ ಪಡೆದುಕೊಂಡಿದ್ದಾರೆ" ಎಂದು ತಿಳಿಸಿದೆ.
"ಕೊರೊನಾದ ಎರಡೂ ಲಸಿಕೆಗಳನ್ನು ಪಡೆದವರ ಪೈಕಿ ದೇಹ ಪ್ರತಿರಕ್ಷಣಾ ಪ್ರಕ್ರಿಯೆಯನ್ನು ರೂಪಿಸಲು ಲಸಿಕೆ ಸಹಾಯವಾಗಿದೆ. ಅಲ್ಲದೇ ಕೊರೊನಾ ಸೋಂಕಿನಿಂದ ಬೇಗನೇ ಗುಣಮುಖವಾಗಲು ನೆರವಾಗಿದೆ" ಎಂದು ತಜ್ಞರು ಮಾಹಿತಿ ನೀಡಿದ್ದಾರೆ.