ವಾಷಿಂಗ್ಟನ್, ಎ.30 (DaijiworldNews/PY): ಭಾರತದಲ್ಲಿ ಕೊರೊನಾ ಪರಿಹಾರ ಕಾರ್ಯಗಳಿಗಾಗಿ, ಅಟ್ಲಾಂಟಾದಿಂದ ಸೇವಾ ಇಂಟರ್ನ್ಯಾಷನಲ್ ಎನ್ನುವ ಭಾರತೀಯ-ಅಮೇರಿಕನ್ ಸ್ವಯಂ ಸೇವಾ ಸಂಸ್ಥೆಯು ಸುಮಾರು 2,184 ಆಮ್ಲಜನಕ ಪೂರೈಕೆ ಪರಿಕರಗಳ ಮೊದಲ ಬ್ಯಾಚ್ ಅನ್ನು ಭಾರತಕ್ಕೆ ರವಾನಿಸಲಾಗಿದೆ.
ಸಾಂದರ್ಭಿಕ ಚಿತ್ರ
ಈ ಸಂಸ್ಥೆಯು ಸಾಮಾಜಿಕ ಜಾಲತಾಣಗಳ ಮುಖೇನ ಕೊರೊನಾ ಪರಿಹಾರ ನಿಧಿಗಾಗಿ ಸುಮಾರು 37.02 ಕೋಟಿ ಸಂಗ್ರಹಿಸುವ ಗುರಿ ಹೊಂದಿತ್ತು. ಈ ಸಂಸ್ಥೆ ಈಗಾಗಲೇ ಕೊರೊನಾ ಪರಿಹಾರಕ್ಕಾಗಿ ಸುಮಾರು 59.23 ಕೋಟಿ ಸಂಗ್ರಹಿಸಿದೆ.
"ಆಮ್ಲಜನಕ ಪೂರೈಕೆ ಪರಿಕರಗಳನ್ನು ಗುರುವಾರ ಅಟ್ಲಾಂಟಾದಿಂದ ನವದೆಹಲಿಗೆ ವಿಮಾನದ ಮೂಲಕ ಕಳುಹಿಸಲಾಗಿದ್ದು, ಉಚಿತವಾಗಿ ಸರಕುಗಳನ್ನು ರವಾನಿಸುತ್ತಿರುವ ಯುನೈಟೆಡ್ ಪಾರ್ಸೆಲ್ ಸರ್ವಿಸ್ ಫೌಂಡೇಶನ್ಗೆ ಧನ್ಯವಾದಗಳು" ಎಂದು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಸೇವಾ ಇಂಟರ್ನ್ಯಾಷನಲ್ ತಿಳಿಸಿದೆ.
ಸಂಸ್ಥೆಯ ವಕ್ತಾರ ಗೀತೇಶ್ ದೇಸಾಯಿ ಮಾಹಿತಿ ನೀಡಿದ್ದು, "ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಹಾಸಿಗೆ ಲಭ್ಯತೆ, ರಕ್ತ ಹಾಗೂ ಔಷಧೀಯ ಸರಬರಾಜುಗಳ ಬಗ್ಗೆ ಮಾಹಿತಿಯನ್ನು ಒದಗಿಸಲು ಡಿಜಿಟಲ್ ಹೆಲ್ಪ್ಡೆಸ್ಕ್ ಸ್ಥಾಪನೆಗೆ ಸೇವಾ ಇಂಟರ್ನ್ಯಾಷನಲ್ ಮುಂದಾಗಿದೆ" ಎಂದು ತಿಳಿಸಿದ್ದಾರೆ.
"ಭಾರತ ಹಾಗೂ ಅಮೇರಿಕಾದಲ್ಲಿ ಸೇವಾ ಇಂಟರ್ನ್ಯಾಷನಲ್ನ ಸ್ವಯಂಸೇವಕರು ಪರಿಹಾರ ನಿಧಿ ಸಂಗ್ರಹಿಸುವ ಹಾಗೂ ಆಸ್ಪತ್ರೆಗಳಿಗೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ನಿಧಿ ಸಂಗ್ರಹಕ್ಕೆ ಉತ್ತಮವಾದ ಪ್ರತಿಕ್ರಿಯೆ ದೊರೆತಿದೆ" ಎಂದು ಹೇಳಿದ್ದಾರೆ.
"ಫೇಸ್ಬುಕ್ ಅಭಿಯಾನದಲ್ಲಿ ಸುಮಾರು 85,000 ಕ್ಕೂ ಅಧಿಕ ದಾನಿಗಳು ಧನ ಸಹಾಯ ಮಾಡಿದ್ದಾರೆ" ಎಂದು ಎನ್ಜಿಓದ ಅಧಿಕಾರಿ ವಿಶ್ವನಾಥ್ ಕೊಪ್ಪ ಹೇಳಿದ್ದಾರೆ.