ವಾಷಿಂಗ್ಟನ್, ಮೇ 01 (DaijiworldNews/MB) : ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆ ಅಮೇರಿಕಾಕ್ಕೆ ಭಾರತದಿಂದ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ಹೇರಿ ಅಮೇರಿಕಾದ ಬಿಡೆನ್ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸರ್ಕಾರಿ ರೋಗ ನಿಯಂತ್ರಣ ಸಂಸ್ಥೆಗಳ ಸಲಹೆಯಂತೆ ಭಾರತದಿಂದ ಬರುವವರಿಗೆ ಪ್ರಯಾಣ ನಿರ್ಬಂಧಿಸಲಾಗಿದೆ. ಈ ನಿಯಮ ಬರುವ ಮಂಗಳವಾರದಿಂದ ( ಮೇ 4) ಜಾರಿಯಾಗಲಿದೆ ಎಂದು ತಿಳಿಸಿದೆ.
ಆದರೆ ಈ ನಿಯಮ ಅಮೇರಿಕನ್ ನಾಗರಿಕರು, ಶಾಶ್ವತ ನಿವಾಸಿಗಳು ಅಥವಾ ಇತರ ವಿನಾಯಿತಿ ಪಡೆದವರಿಗೆ ಅನ್ವಯಿಸುವುದಿಲ್ಲ ಎಂದು ಕೂಡಾ ಇದೇ ವೇಳೆ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 4,01,993 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 19,164,969 ಕ್ಕೆ ಏರಿಕೆಯಾಗಿದೆ. 3,523 ಕೊರೊನಾ ಸೋಂಕಿತರು ಮೃತಪಟ್ಟಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 2,11,853 ಕ್ಕೆ ಏರಿಕೆಯಾಗಿದೆ.
ಇನ್ನು ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಯುಎಇ ಸೇರಿದಂತೆ ಹಲವು ದೇಶಗಳು ಭಾರತದ ಪ್ರಯಾಣ ನಿಷೇಧಿಸಿದೆ.