ವಾಷಿಂಗ್ಟನ್, ಮೇ.02 (DaijiworldNews/HR): ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಕೆಲವು ವಾರಗಳ ಕಾಲ ಲಾಕ್ಡೌನ್ ಜಾರಿಗೊಳಿಸುವುದು ಉತ್ತಮ" ಎಂದು ಅಮೇರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಫೌಸಿ ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭಾರತದಲ್ಲಿ ಕೊರೊನಾದ ಎರಡನೇ ಅಲೆ ಅತ್ಯಂತ ಗಂಭೀರವಾಗಿದ್ದು, ನಿಯಂತ್ರಣಕ್ಕೆ ತರಲು ಕಷ್ಟವಾಗಬಹುದು ಹಾಗಾಗಿ ಲಾಕ್ಡೌನ್ ಜಾರಿಗೊಳಿಸುವುದರೊಂದಿಗೆ ತಕ್ಷಣ ಆಕ್ಸಿಜನ್ ಪೂರೈಕೆ ಮಾಡುವುದು, ವೈದ್ಯಕೀಯ ಸೇವೆ, ಪಿಪಿ ಇಗಳು ಅತ್ಯಂತ ಮುಖ್ಯವಾಗಿವೆ" ಎಂದರು.
"ಭಾರತದಲ್ಲಿ ಕೊರೊನಾ ವಿರುದ್ಧದ ಜಯವನ್ನು ಬಹುಬೇಗ ಘೋಷಣೆ ಮಾಡಲಾಯಿತು, ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಲಾಕ್ಡೌನ್ ಮೊರೆ ಹೋಗುವುದು ಅಗತ್ಯ" ಎಂದಿದ್ದಾರೆ.
ಇನ್ನು "ತುಂಬಾ ಸಮಯ ಲಾಕ್ಡೌನ್ ಮಾಡುವುದು ಅಗತ್ಯವಿಲ್ಲವಾದರೂ ತಾತ್ಕಾಲಿಕ ಲಾಕ್ಡೌನ್ ಕೊರೊನಾವನ್ನು ತಡೆಗಟ್ಟಲು ಅಗತ್ಯ" ಎಂದು ಹೇಳಿದ್ದಾರೆ.