ವಾಷಿಂಗ್ಟನ್, ಮೇ 04 (DaijiworldNews/MB) : ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಅಮೇರಿಕಾದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ, ಭಾರತದಲ್ಲಿ ಲಾಕ್ಡೌನ್ ಹೇರಲು ಶಿಫಾರಸ್ಸು ಮಾಡಿದ್ದಾರೆ.
''ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಭಾರತದಲ್ಲಿ ಲಾಕ್ಡೌನ್ ಮಾಡುವುದೇ ಒಳಿತು. ಕಳೆದ ವರ್ಷ ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳು ನಿಗದಿತ ಅವಧಿವರೆಗೂ ಸಂಪೂರ್ಣ ಲಾಕ್ ಡೌನ್ ಮಾಡಿದ ಹಿನ್ನೆಲೆ ಅಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ'' ಎಂದು ಹೇಳಿದರು.
''ಇನ್ನು ಆರು ತಿಂಗಳ ಕಾಲ ಲಾಕ್ಡೌನ್ ಮಾಡಬೇಕಾಗಿಲ್ಲ. ಕೆಲವು ವಾರಗಳು ಮಾತ್ರ ಲಾಕ್ಡೌನ್ ಮಾಡಬೇಕು. ಆಗ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ'' ಎಂದು ಅಭಿಪ್ರಾಯಿಸಿದ್ದಾರೆ.
''ಭಾರತದಲ್ಲಿ ಸದ್ಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಂದರ್ಭದಲ್ಲಿ ಸಾಮೂಹಿಕ ಲಸಿಕೆ ಅಭಿಯಾನ ನಡೆಸುವುದು ಹಾಗೂ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ಸ್ಥಾಪಿಸುವ ಅಗತ್ಯವಿದೆ'' ಎಂದು ತಜ್ಞರು ಆಗಿರುವ ಡಾ. ಫೌಸಿ ಸಲಹೆ ನೀಡಿದ್ದಾರೆ.
''ಸದ್ಯ ಭಾರತವೇ ತಯಾರಿ ಮಾಡುವ ಎರಡು ಲಸಿಕೆಗಳು ಇದ್ದು ಸಾಮೂಹಿಕ ಲಸಿಕೆ ಅಭಿಯಾನಕ್ಕಾಗಿ ಇತರ ರಾಷ್ಟ್ರಗಳಿಂದ ಲಸಿಕೆ ಖರೀದಿಸಬೇಕಾಗುತ್ತದೆ. ಭಾರತಕ್ಕೆ ಲಸಿಕೆ ಪೂರೈಸಲು ಅಮೇರಿಕಾ, ರಷ್ಯಾದಂತಹ ರಾಷ್ಟ್ರಗಳು ಮುಂದೆ ಬರಬೇಕು. ಆಸ್ಪತ್ರೆಗಳು, ಬೆಡ್ ಕೊರತೆ, ಆಕ್ಸಿಜನ್ ಪೂರೈಕೆ ಕೊರತೆ ಹತಾಶವಾದದ್ದು ಹಾಗಾಗಿ ಇತರ ರಾಷ್ಟ್ರಗಳು ಭಾರತದ ನೆರವಿಗೆ ಬರಬೇಕಾಗಿದೆ'' ಎಂದು ಹೇಳಿದ್ದಾರೆ.