ಮಾಲಿ, ಮೇ 05 (DaijiworldNews/MB) : ಮಾಲಿ ದೇಶದ ಮಹಿಳೆಯೊಬ್ಬರು ಮೊರಾಕ್ಕೊದಲ್ಲಿ ಮಂಗಳವಾರ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಭತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.
ತೀರಾ ಬಡ ಪಶ್ಚಿಮ ಆಫ್ರಿಕನ್ ದೇಶವಾದ ಮಾಲಿಯ ಸರ್ಕಾರಿ ವಿಮಾನಯಾನ ಉದ್ಯೋಗಿಯಾಗಿದ್ದ 25 ವರ್ಷದ ಹಲೀಮಾ ಸಿಸ್ಸೆ ಎಂಬ ಮಹಿಳೆ ಉತ್ತಮ ವೈದ್ಯಕೀಯ ಸೇವೆಗಾಗಿ ಮಾರ್ಚ್ 30ರಂದು ಮೊರಾಕ್ಕೊಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಿದಾಗ ಗರ್ಭದಲ್ಲಿ ಏಳು ಶಿಶುಗಳಿವೆ ಎಂದು ತಿಳಿದು ಬಂದಿತ್ತು.
ಈ ಏಳು ಶಿಶುಗಳ ಹೆರಿಗೆ ಮಾಡಿಸುವುದೇ ವೈದ್ಯ ಲೋಕಕ್ಕೆ ಸವಾಲಾಗಿತ್ತು. ಮಹಿಳೆಗೆ ಸಿಸೇರಿಯನ್ ಶಸ್ತ್ರಚಕಿತ್ಸೆ ಮಾಡಿದ ಸಂದರ್ಭದಲ್ಲೇ ಆಕೆಯ ಹೊಟ್ಟೆಯ ಒಳಗೆ 9 ಮಕ್ಕಳಿದ್ದವು ಎಂದು ತಿಳಿದು ಬಂದಿದೆ. 7 ಭ್ರೂಣಗಳ ಮಧ್ಯೆ ಇನ್ನೂ ಎರಡು ಭ್ರೂಣಗಳು ಇದ್ದವು ಎಂದು ಹೇಳಲಾಗಿದೆ.
ಮಹಿಳೆ ಒಂಭತ್ತು ಮಕ್ಕಳಿಗೆ ಜನ್ಮ ನೀಡಿರುವುದನ್ನು ಮಾಲಿ ಸರ್ಕಾರ ಪ್ರಕಟಿಸಿದೆ. ಆದರೆ ಮೊರಾಕ್ಕೊ ಅಧಿಕಾರಿಗಳು ಇದನ್ನು ಇನ್ನೂ ದೃಢಪಡಿಸಿಲ್ಲ. ಸಿಸೇರಿಯನ್ ಹೆರಿಗೆಯಲ್ಲಿ ಸಿಸ್ಸೆ ಐದು ಮಂದಿ ಹೆಣ್ಣುಮಕ್ಕಳು ಮತ್ತು ನಾಲ್ವರು ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಮಾಲಿ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಾಲಿ ಆರೋಗ್ಯ ಸಚಿವ ಫಂಟಾ ಸಿಬಿ, "ಈವರೆಗೆ ಮಕ್ಕಳು ಹಾಗೂ ತಾಯಿ ಕ್ಷೇಮವಾಗಿದ್ದಾರೆ. ಸಿಸ್ಸಿಯೊಂದಿಗೆ ಮೊರಾಕ್ಕೊಗೆ ತೆರಳಿದ್ದ ಆಕೆಯ ವೈದ್ಯ ಈ ಮಾಹಿತಿ ನೀಡಿದ್ದಾರೆ'' ಎಂದು ತಿಳಿಸಿದ್ದು ಈ ಅಪರೂಪದ ಹೆರಿಗೆ ಮಾಡಿಸಿದ ಮೊರಾಕ್ಕೊ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಆದರೆ ಮೊರಾಕ್ಕೊ ಆರೋಗ್ಯ ಸಚಿವಾಲಯದ ವಕ್ತಾರ ರಿಚರ್ಡ್ ಕೌಧಾರಿ, ''ದೇಶದ ಆಸ್ಪತ್ರೆಯಲ್ಲಿ ಒಂಭತ್ತು ಮಕ್ಕಳನ್ನು ಹೆತ್ತ ಬಗ್ಗೆ ಯಾವುದೇ ಮಾಹಿತಿ ಇಲ್ಲ'' ಎಂದು ಹೇಳಿದ್ದಾರೆ.