ವಾಷಿಂಗ್ಟನ್, ಮೇ.06 (DaijiworldNews/PY): ಕೊರೊನಾ ಸಾಂಕ್ರಾಮಿಕ ನಡುವೆ ಲಸಿಕೆ ಉತ್ಪಾದನೆ, ಪೂರೈಕೆಯ ವ್ಯಾಪಾರ ಹೆಚ್ಚಿಸಲು ಸಂಬಂಧಿಸಿದ ಬೌದ್ದಿಕ ಹಕ್ಕುಗಳನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕೆನ್ನುವ ದಕ್ಷಿಣ ಆಫ್ರಿಕಾ, ಭಾರತದ ಮನವಿಗೆ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಬೆಂಬಲಿಸಿದಕ್ಕೆ ಭಾರತ ಶ್ಲಾಘಿಸಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿಆರ್ಐಪಿಎಸ್ ಒಪ್ಪಂದದ ಕೆಲವು ನಿಯಮಗಳ ಜಾರಿಗೆ ಕಾಲಮಿತಿ ತಡೆ ನೀಡಬೇಕು ಎಂದು ವಿಶ್ವ ವ್ಯಾಪಾರ ಸಂಘಟನೆಗೆ ಮನವಿ ಮಾಡಿದ್ದು, ಭಾರತದ ಈ ನಡೆಗೆ ಹಲವು ದೇಶಗಳು ಬೆಂಬಲ ವ್ಯಕ್ತಪಡಿಸಿದ್ದವು.
"ಕೊರೊನಾ ಲಸಿಕೆಗಳಿಗೆ ಐಪಿಆರ್ ಮನ್ನಾ ಮಾಡಲು ಅಮೇರಿಕಾ ಆಡಳಿತ ನೀಡಿದ ಬೆಂಬಲವನ್ನು ನಾವು ಪ್ರಶಂಶಿಸುತ್ತೇವೆ" ಎಂದು ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.
"ಕೊರೊನಾ ಸಾಂಕ್ರಾಮಿಕವು ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಅಸಾಧಾರಣ ಕ್ರಮಗಳಿಗೆ ಕರೆ ನೀಡಿವೆ" ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.
"ಬಿಡೆನ್ ಆಡಳಿತವು ಬೌದ್ಧಿಕ ಆಸ್ತಿ ಸಂರಕ್ಷಣೆಯನ್ನು ನಂಬುತ್ತದೆ. ಆದರೆ, ಕೊರೊನಾ ಸೋಂಕನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೊರೊನಾ ಲಸಿಕೆಗಳಿಗೆ ಟಿಆರ್ಐಪಿಎಸ್ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವುದಕ್ಕೆ ಬೆಂಬಲ ನೀಡುತ್ತದೆ" ಎಂದು ತೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.