ಇಸ್ಲಾಮಾಬಾದ್, ಮೇ.06 (DaijiworldNews/PY): "ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕಾನೂನು ಪ್ರಕ್ರಿಯೆಗಳಲ್ಲಿ ಸಹಕರಿಸಬೇಕು. ಭಾರತದ ಸಾರ್ವಭೌಮತ್ವಕ್ಕೆ ಇದರಿಂದ ಯಾವುದೇ ಧಕ್ಕೆ ಆಗುವುದಿಲ್ಲ" ಎಂದು ಪಾಕಿಸ್ತಾನದ ಉನ್ನತ ನ್ಯಾಯಾಲಯ ತಿಳಿಸಿದೆ.
ಪಾಕಿಸ್ತಾನದ ಕಾನೂನು ಮತ್ತು ನ್ಯಾಯ ಸಚಿವಾಲಯವು ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಕ ಮಾಡಲು ಸೂಚಿಸುವಂತೆ ಕೋರಿ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಅಥರ್ ಮಿನಾಲಾ, ನ್ಯಾಯಮೂರ್ತಿಗಳಾದ ಅಮರ್ ಫಾರೂಕ್ ಮತ್ತು ಮಿಯಾಂಗುಲ್ ಹಸನ್ ಔರಂಗಜೇಬ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ.
"ಅಂತರಾಷ್ಟ್ರೀಯ ನ್ಯಾಯಾಲಯ ಕಳೆದ ವರ್ಷ ನೀಡುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಕುಲಭೂಷಣ್ ಜಾಧವ್ಗೆ ಕಾನೂನುಬದ್ದ ಪರಿಹಾರವನ್ನು ಪಡೆಯಲು ಅವಕಾಶ ಕಲ್ಪಿಸುವ ಸಲುವಾಗಿ ಪಾಕಿಸ್ತಾನ ಸುಗ್ರೀವಾಜ್ಞೆ ಹೊರಡಿಸಿತ್ತು" ಎಂದು ಅಟಾರ್ನಿ ಜನರಲ್ ಖಾಲೀದ್ ಜಾವೇದ್ ಖಾನ್ ಹೇಳಿದ್ದಾರೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕಾನೂನು ಕ್ರಮಗಳಲ್ಲಿ ಪಾಲ್ಗೊಳ್ಳಲು ಆಕ್ಷೇಪ ವ್ಯಕ್ತಪಡಿಸುತ್ತಿದೆ. ಐಎಚ್ಸಿ ಪ್ರಕ್ರಿಯೆಗಳಿಗಾಗಿ ವಕೀಲರನ್ನು ನೇಮಿಸಲು ಭಾರತ ನಿರಾಕರಿಸುತ್ತಿದೆ" ಎಂದಿದ್ದಾರೆ.
"ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ನಾವು ಯತ್ನಿಸುತ್ತಿಲ್ಲ. ಆದರೆ, ಭಾರತ, ಐಸಿಜೆ ತೀರ್ಮನವನ್ನು ಪಾಲಿಸಲು ನಾವು ಯಾವ ರೀತಿಯಾದ ಪ್ರಕ್ರಿಯೆಯನ್ನು ನಡೆಸಬೇಕು ಎನ್ನುವದನ್ನು ತಿಳಿಸಲಿ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
"ಐವರು ಕೈದಿಗಳನ್ನು ಬಿಡುಗಡೆ ಮಾಡುವಂತೆ ಈ ಹಿಂದೆ ಭಾರತದ ರಾಯಭಾರಿ ಕಚೇರಿ ಇಸ್ಲಾಮಾಬಾದ್ ಹೈಕೋರ್ಟ್ಗೆ ಮನವಿ ಮಾಡಿತ್ತು. ಆ ಸಂದರ್ಭ ನ್ಯಾಯಾಲಯ ಭಾರತದ ಪರ ತೀರ್ಪು ನೀಡಿತ್ತು. ಆದರೆ, ಇದೀಗ ಅದೇ ನ್ಯಾಯಾಲಯದ ನ್ಯಾಯಸಮ್ಮತ ತೀರ್ಪನ್ನು ಭಾರತ ಪ್ರಶ್ನಿಸುತ್ತಿದೆ. ಈ ವಿಚಾರ ಆಶ್ಚರ್ಯಕರವಾಗಿದೆ" ಎಂದಿದ್ದಾರೆ.
ಈ ಸಂಬಂಧ ಮುಂದಿನ ವಿಚಾರಣೆಯನ್ನು ಜೂನ್ 15ಕ್ಕೆ ನಿಗದಿ ಮಾಡಿದೆ.