ವಾಷಿಂಗ್ಟನ್, ಮೇ.07 (DaijiworldNews/HR): ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಅದರ ವಿರುದ್ಧದ ಭಾರತದ ಹೋರಾಟಕ್ಕೆ ನೆರವಾಗಲು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ರಚಿಸಲಾಗಿರುವ ಜಾಗತಿಕ ಕಾರ್ಯಪಡೆಯ ಸಮಿತಿಗೆ ಗೂಗಲ್ನ ಸುಂದರ್ ಪಿಚೈ, ಡೆಲಾಯ್ಟ್ನ ಪುನೀತ್ ರೆಂಜನ್ ಮತ್ತು ಅಡೋಬ್ನ ಶಂತನು ನಾರಾಯಣ್ ಅವರು ಸೇರ್ಪಡೆಗೊಂಡಿದ್ದು, ಈ ಮೂವರು ಭಾರತೀಯ-ಅಮೇರಿಕನ್ ಸಿಇಒಗಳ ಹೆಸರನ್ನು ಕಾರ್ಯಕಾರಿ ಸಮಿತಿಯ ಪಟ್ಟಿಗೆ ಸೇರಿಸಲಾಗಿದೆ.
ಗೂಗಲ್ ಸಿಇಒ ಸುಂದರ್ ಪಿಚೈ
ಭಾರತದಲ್ಲಿ ಕೊರೊನಾ ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಅದಕ್ಕೆ ನೆರವಾಗಲು ಅಮೇರಿಕಾದ ಕಂಪನಿಗಳ ನೆರವನ್ನು ಸಂಘಟಿಸುವಲ್ಲಿ ಈ ಮೂವರು ಸಿಇಒಗಳು ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.
ಇನ್ನು ಮೆಲಿಂದಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್, ಬಿಸಿನೆಸ್ ರೌಂಡ್ಟೇಬಲ್ ಅಧ್ಯಕ್ಷ ಮತ್ತು ಸಿಇಒ ಜೋಶುವಾ ಬೋಲ್ಟನ್ ಮತ್ತು ಯುಎಸ್ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮತ್ತು ಸಿಇಒ ಸುಸೇನ್ ಕ್ಲಾರ್ಕ್ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಅಮೇರಿಕಾದ ಚೇಂಬರ್ ಆಫ್ ಕಾಮರ್ಸ್ ಸಂಯೋಜಿಸಿರುವ ಹೊಸದಾಗಿ ರೂಪುಗೊಂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಟಾಸ್ಕ್ ಫೋರ್ಸ್ ಆಗಿದೆ. ಇದಕ್ಕೆ ಬಿಸಿನೆಸ್ ರೌಂಡ್ಟೇಬಲ್ ಬೆಂಬಲ ಸೂಚಿಸಿದೆ.
ಭಾರತದಲ್ಲಿನ ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೆರವು ನೀಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಈ ಕಾರ್ಯಪಡೆಯು ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂನೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಇನ್ನು ಅಮೇರಿಕಾದ ಕಾರ್ಪೊರೇಟ್ ವಲಯವು ಈವರೆಗೆ ಭಾರತಕ್ಕೆ 25 ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಒದಗಿಸುವ ಬದ್ಧತೆ ಪ್ರದರ್ಶಿಸಿದ್ದು, ಡೆಲಾಯ್ಟ್ ಒದಗಿಸಿದ ಮೊದಲ 1,000 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು ಫೆಡ್ಎಕ್ಸ್ನ ನೆರವಿನೊಂದಿಗೆ ಏಪ್ರಿಲ್ 25 ರಂದು ಭಾರತಕ್ಕೆ ಬಂದಿವೆ.