ಬೀಜಿಂಗ್, ಮೇ 08 (DaijiworldNews/MS): ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಚೀನಾದ ಸಿನೊಫಾರ್ಮ್ ಕೋವಿಡ್ -19 ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಸಿನೋಫಾರ್ಮ್ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ದೊರಕಿರುವುದು ಚೀನಾಗೆ ಲಸಿಕೆ ವಿಚಾರದಲ್ಲಿ ದೊಡ್ಡ ಮುನ್ನಡೆ ಸಿಕ್ಕಂತಾಗಿದೆ.
ಫೈಜರ್-ಬಯೋಟೆಕ್, ಮಾಡರ್ನಾ ಆಸ್ಟ್ರಾಜೆನೆಕಾ-ಎಸ್ ಕೆ ಬಯೋ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಾನ್ಸೆನ್ ಲಸಿಕೆಗಳನ್ನು ಡಬ್ಲ್ಯುಎಚ್ಒ ಈ ಹಿಂದೆಯೇ ಮಾನ್ಯ ಮಾಡಿತ್ತು. ಆದರೆ ಡೇಟಾ ಸಂಬಂಧಿತ ಸಮಸ್ಯೆಗಳಿಂದಾಗಿ ಚೀನಾದ ಲಸಿಕೆಗೆ ಮಾನ್ಯತೆ ವಿಳಂಬವಾಗಿತ್ತು.
ಚೀನಾ ತನ್ನ ಐದು ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ ಮತ್ತು ವಿಶೇಷವಾಗಿ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳನ್ನು ದೇಶ ಮತ್ತು ವಿದೇಶಗಳಲ್ಲಿ ಬಳಸುತ್ತಿದೆ. ಸಿನೋಫಾರ್ಮ್ ಲಸಿಕೆಯನ್ನು 45 ದೇಶಗಳು ಬಳಸಲು ವ್ಯಾಪ್ತಿ ಹೊಂದಿದ್ದು, 65 ದಶಲಕ್ಷ ಪ್ರಮಾಣವನ್ನು ನೀಡಲಾಗಿದೆ. ಆದರೆ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆಯದ ಕಾರಣ ಅನೇಕ ದೇಶಗಳು ಅದನ್ನು ಬಳಸಲು ಹಿಂಜರಿಯುತ್ತಿವೆ. ಇದೀಗ ವಿಶ್ವಸಂಸ್ಥೆಯ ಗ್ರೀನ್ ಸಿಗ್ನಲ್ ಚೀನಾಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಚೀನಾ ದೇಶವೂ ವಿವಿಧ ದೇಶಗಳ ಲಸಿಕೆಯನ್ನು ಹಿಂದಿಕ್ಕಿ ತನ್ನ ಲಸಿಕೆಯನ್ನು ವಿಶ್ವವ್ಯಾಪ್ತಿ ಮಾರಾಟ ಮಾಡಲು ಆರೋಗ್ಯ ಸಂಸ್ಥೆಯ ಅಂಗೀಕಾರಕ್ಕಾಗಿ ಕಾಯುತ್ತಿತ್ತು. ಇದೀಗ ಚೀನಾ ಲಸಿಕೆಯೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಲಿದೆ.