ಇಸ್ಲಾಮಾಬಾದ್, ಮೇ.08 (DaijiworldNews/PY): ಪಾಕಿಸ್ತಾನದ ಹಿಂದೂ ಮಹಿಳೆಯೊಬ್ಬರು ಪ್ರತಿಷ್ಠಿತ ಕೇಂದ್ರೀಯ ಸುಪೀರಿಯರ್ ಸರ್ವಿಸಸ್ (ಸಿಎಸ್ಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಾಕಿಸ್ತಾನದ ಆಡಳಿತ ಸೇವೆಗೆ ಆಯ್ಕೆಯಾಗಿದ್ದಾರೆ.
ಸಿಂಧ್ ಪ್ರಾಂತ್ಯದ ಶಿಕಾರ್ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ವೈದ್ಯೆ ಸಾನಾ ರಮಾಚಂದ್ ಅವರು ಪಾಕಿಸ್ತಾನದಲ್ಲಿ ಈ ಸಾಧನೆ ಮಾಡಿದ ಮೊದಲ ಹಿಂದೂ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಲಿಖಿತ ಪರೀಕ್ಷೆಗೆ ಹಾಜರಾಗಿದ್ದ 18,553 ಅಭ್ಯರ್ಥಿಗಳಲ್ಲಿ ತೇರ್ಗಡೆಯಾದ 221 ಮಂದಿ ಅಭ್ಯರ್ಥಿಗಳ ಪೈಕಿ ಸಾನಾ ಕೂಡಾ ಒಬ್ಬರು. ವಿಸ್ತಾರವಾದ ವೈದ್ಯಕೀಯ, ಮಾನಸಿಕ ಮತ್ತು ಮೌಖಿಕ ಪರೀಕ್ಷೆಗಳ ಬಳಿಕ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಫಲಿತಾಂಶದ ಬಳಿಕ ಟ್ವೀಟ್ ಮಾಡಿರುವ ಸಾನಾ ರಾಮಾಚಂದ್, "ನಾನು ಸರ್ವಶಕ್ತನಾದ ಅಲ್ಲಾಹ್ನ ಕೃಪೆಯಿಂದ ಸಿಎಸ್ಎಸ್ 2020ನ್ನು ಪೂರ್ಣಗೊಳಿಸಿದ್ದು, ಪಿಎಎಸ್ ಹುದ್ದೆಗೆ ನೇಮಕವಾಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತಿದೆ. ಇವೆಲ್ಲದಕ್ಕೂ ನನ್ನ ಪೋಷಕರೇ ಕಾರಣ" ಎಂದಿದ್ದಾರೆ.
ಪಿಪಿಪಿ ಹಿರಿಯ ಮುಖಂಡ ಫರ್ಹತುಲ್ಲಾ ಬಾಬರ್ ಟ್ವೀಟ್ ಮಾಡಿದ್ದು, "ಪಾಕಿಸ್ತಾನದ ಹಿಂಸೂ ಸಮುದಾಯಕ್ಕೆ ಸನಾ ರಾಮಚಂದ್ ಹೆಮ್ಮೆಯುಂಟು ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.