ಕಾಬೂಲ್, ಮೇ.09 (DaijiworldNews/PY): ಕಾಬೂಲ್ನ ಶಾಲೆವೊಂದರ ಮುಂಭಾಗದಲ್ಲಿ ಮೇ 8ರ ಶನಿವಾರ ನಡೆದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಾಬೂಲ್ನ ಪಶ್ಚಿಮದಲ್ಲಿರುವ ಸಯೀದ್-ಉಲ್-ಶುಹಾದ್ ಹೈಸ್ಕೂಲ್ನ ಸಮೀಪ ಮೂರು ಸ್ಪೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. "ಘಟನೆಯಲ್ಲಿ ಗಾಯಗೊಂಡವರ ಪೈಕಿ ಹೆಚ್ಚು ಮಹಿಳಾ ವಿದ್ಯಾರ್ಥಿಗಳೇ ಇದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಘಟನೆಗೆ ತಾಲಿಬಾನ್ ಕಾರಣ" ಎಂದು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.
"ಸ್ಪೋಟ ಸಂಭವಿಸುವ ಸಂದರ್ಭ ಕೆಲ ವಿದ್ಯಾರ್ಥಿನಿಯರು ಶಾಲೆ ಮುಗಿಸಿ ಮನೆಗೆ ಹೊರಡುತ್ತಿದ್ದರು" ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.
"ಸಯೀದ್-ಉಲ್-ಶುಹಾದ್ ಶಾಲೆಯಲ್ಲಿ ಮೂರು ಪಾಳಿಯಲ್ಲಿ ಪಾಠಗಳು ನಡೆಯುತ್ತಿದ್ದು, ಎರಡನೇ ಪಾಳಿಯಲ್ಲಿ ವಿದ್ಯಾರ್ಥಿನಿಯರಿಗೆ ಪಾಠ ನಡೆಯುತ್ತಿತ್ತು" ಎಂದು ಅಫ್ಘಾನ್ ಶಿಕ್ಷಣ ಸಚಿವೆ ಮಾಹಿತಿ ನೀಡಿದ್ದಾರೆ.