ಮೆಲ್ಬರ್ನ್, ಮೇ.09 (DaijiworldNews/PY): "ಕೊರೊನಾದಿಂದ ದೇಶದ ಪ್ರಜೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಗತ್ತಿನೊಂದಿಗೆ ಕಲ್ಪಿಸುವ ಎಲ್ಲಾ ಗಡಿಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗುವುದು" ಎಂದು ರವಿವಾರ ಆಸ್ಟ್ರೇಲಿಯಾ ಪ್ರಕಟಿಸಿದೆ.
ಈ ನಿರ್ಧಾರವನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಪ್ರಕಟಿಸಿದ್ದು, "ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಗಡಿ ಕಳೆದ ಮಾರ್ಚ್ ತಿಗಳಿನಿಂದಲೂ ಬಂದ್ ಆಗಿದೆ. ಕಠಿಣ ನಿಯಮ ಪಾಲನೆಯೊಂದಿಗೆ ದೇಶದ ಪ್ರಜೆಗಳಿಗೆ ಮಾತ್ರವೇ ದೇಶಕ್ಕೆ ವಾಪಾಸ್ಸಾಗಲು ಅವಕಾಶವಿದೆ" ಎಂದು ತಿಳಿಸಿದ್ದಾರೆ.
"ಜಗತ್ತಿನ ಜೊತೆ ಸಂಪರ್ಕ ಹೊಂದಬೇಕು ಎನ್ನು ಇಚ್ಛೆ ಆಸ್ಟ್ರೇಲಿಯನ್ನರಲ್ಲಿ ಇದೆ ಎಂದು ನಾನು ಭಾವಿಸಿಯೇ ಇರಲಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ನಾವು ಜಾಗರೂಕತೆಯಿಂದ ಗಮನಿಸುತ್ತಿದ್ದೇವೆ" ಎಂದಿದ್ದಾರೆ.
"ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೊರೊನಾ ಲಸಿಕೆ ನೀಡಿದ ಬಳಿಕವೂ ಕೂಡಾ ಜಗತ್ತಿನ ಜೊತೆ ಮರುಸಂಪರ್ಕ ಹೊಂದುವುದು ಸುರಕ್ಷಿತವೇ ಎನ್ನುವ ವಿಚಾರದ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಈ ಕಾರಣದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.