ಕಠ್ಮಂಡು, ಮೇ 11 (DaijiworldNews/MB) : ಭಾರತದ ವಿರುದ್ದವಾಗಿ ಹೇಳಿಕೆಗಳನ್ನು ನೀಡುತ್ತಲ್ಲೇ ಇದ್ದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ವಿಶ್ವಾಸ ಮತಯಾಚನೆಯಲ್ಲಿ ಸೋತ ಹಿನ್ನೆಲೆ ಪ್ರಧಾನಿ ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ಬಂದಿದೆ.
ನೇಪಾಳ ಸಂಸತ್ತಿನಲ್ಲಿ 275 ಸದಸ್ಯರು ಇದ್ದು, ವಿಶ್ವಾಸ ಮತ ಪಡೆದು ಅಧಿಕಾರ ಮುಂದುವರೆಸಲು ಕನಿಷ್ಠ 136 ಮತಗಳನ್ನು ಅವರು ಪಡೆಯಬೇಕಾಗಿತ್ತು. ಆದರೆ ಪ್ರಧಾನಿ ಒಲಿ 93 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ.
ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ಉಪಸ್ಥಿತಿಯಲ್ಲಿ ಸೋಮವಾರ ವಿಶ್ವಾಸ ಮತ ಯಾಚನೆ ನಡೆಸಲಾಗಿದೆ. ಈ ಸಂದರ್ಭ 93 ಮತಗಳನ್ನು ಮಾತ್ರ ಪಡೆಯುವ ಮೂಲಕ ಸೋಲು ಕಂಡ ಒಲಿ, ಈಗ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ.
ಪುಷ್ಪಕಮಲ್ ದಹಾಲ್ 'ಪ್ರಚಂಡ' ನೇತೃತ್ವದ ಬಣವು ನೇಪಾಳ ಕಮ್ಯುನಿಸ್ಟ್ ಪಾರ್ಟಿಗೆ ಈ ಹಿಂದೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದ ಹಿನ್ನೆಲೆ ಒಲಿಗೆ ವಿಶ್ವಾಸ ಮತಯಾಚನೆಯಲ್ಲಿ ಸೋಲು ಉಂಟಾಗಿದೆ.
ಇನ್ನು ಪ್ರಮುಖವಾಗಿ 124 ಸದಸ್ಯರು ಒಲಿ ವಿರುದ್ಧ ಮತಹಾಕಿದ್ದಾರೆ. 15 ಸದಸ್ಯರು ತಟಸ್ಥರಾಗಿದ್ದರು. ನೇಪಾಳಿ ಕಾಂಗ್ರೆಸ್ ಪಾರ್ಟಿ (61 ಸದಸ್ಯರು) ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (49 ಸದಸ್ಯರು) ಒಲಿ ವಿರುದ್ಧ ಮತ ಹಾಕಿದರು.