ಜಿನೀವಾ, ಮೇ 11 (DaijiworldNews/MB) : ಭಾರತದಲ್ಲಿ ಕಂಡು ಬಂದಿರುವ ಕೊರೊನಾ ರೂಪಾಂತರಿ (ಬಿ -1617) ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಘೋಷಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕೋವಿಡ್ ವಿಭಾಗದ ತಾಂತ್ರಿಕ ತಜ್ಞೆ ಡಾ. ಮರಿಯಾ ವ್ಯಾನ್ ಕರ್ಖೋವ್, ''ಪ್ರಾಥಮಿಕ ಅಧ್ಯಯನಗಳ ಪ್ರಕಾರ ಬಿ -1617 ರೂಪಾಂತರಿ ವೈರಸ್ ಇತರ ರೂಪಾಂತರಿ ವೈರಸ್ ಹಾಗೂ ಮೂಲ ವೈರಸ್ಗಳಿಗಿಂತ ಸುಲಭವಾಗಿ ಹರಡುತ್ತದೆ'' ಎಂದು ಹೇಳಿದ್ದಾರೆ. ಇನ್ನು ಡಬ್ಲ್ಯೂಎಚ್ಒ ಪ್ರಕಾರ,ಈ ರೂಪಾಂತರವು ಈಗಾಗಲೇ 30 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು ಈ ಹಿನ್ನೆಲೆ ಆತಂಕ ವ್ಯಕ್ತಪಡಿದೆ.
ಡಬ್ಲ್ಯುಎಚ್ಒ ಈಗಾಗಲೇ ಯುಕೆ ಯ (ಬಿ 117), ದಕ್ಷಿಣ ಆಫ್ರಿಕಾದ (ಬಿ 1351) ಮತ್ತು ಬ್ರೆಜಿಲಿಯನ್ (ಪಿ 1) ರೂಪಾಂತರಗಳನ್ನು ಅಪಾಯಕಾರಿ ಎಂದು ಘೋಷಿಸಿದೆ. ಈಗ ಭಾರತದ ಬಿ -1617 ರೂಪಾತರಿ ಕೊರೊನಾ ಸೋಂಕನ್ನು ಅಪಾಯಕಾರಿ ಎಂದು ಹೇಳಿದೆ.
''ನಮಗೆ ಭಾರತದಲ್ಲಿ ವೈರಸ್ ಪ್ರಸರಣದ ತೀವ್ರತೆಯ ಮಾಹಿತಿಯಿದೆ. ಈ ಸಂಬಂಧ ಸ್ಥಳೀಯವಾಗಿ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನೂ ನಾವು ಪರಿಶೀಲಿಸುತ್ತಿದ್ದೇವೆ. ನಮ್ಮೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನೆ ಮತ್ತು ಪ್ರಯೋಗಾಲಯಗಳಿಂದ ವಿವರವನ್ನು ಸಂಗ್ರಹಿಸಿದ್ದೇವೆ. ಅವರ ಪ್ರಕಾರ ಈ ರೂಪಾಂತರಿ ಪ್ರಸರಣ ಗಂಭೀರವಾಗಿದ್ದು, ಅದು ಜಗತ್ತಿಗೆ ಆತಂಕಕಾರಿಯಾಗಿದೆ'' ಎಂದು ಹೇಳಿದ್ದಾರೆ.
ಇನ್ನು ''ಇದು ಪ್ರಾಥಮಿಕ ಮಾಹಿತಿ, ರೂಪಾಂತರಿಯ ಜೀನೋಮ್ ಬಗ್ಗೆ ಮತ್ತಷ್ಟು ಆಳವಾಗಿ ತಿಳಿದುಕೊಳ್ಳಬೇಕಾಗಿದೆ'' ಎಂದು ಕೂಡಾ ಅವರು ಹೇಳಿದ್ದಾರೆ.
''ಭವಿಷ್ಯದಲ್ಲಿ ನಾವು ಹೆಚ್ಚಿನ ಸಂಖ್ಯೆಯ ಕೊರೊನಾ ವೈರಸ್ಗಳು ಹಾಗೂ ರೂಪಾಂತರಿಗಳನ್ನು ನೋಡಬೇಕಾಗುತ್ತದೆ'' ಎಂದು ಕಳವಳ ವ್ಯಕ್ತಪಡಿಸಿರುವ ಅವರು, ''ಈಗ ಪ್ರಸರಣ ತಡೆದು, ರೋಗದ ತೀವ್ರತೆಯನ್ನು ಕಡಿಮೆ ಮಾಡಿ, ಸಾವುಗಳ ಸಂಖ್ಯೆ ಕಡಿಮೆ ಮಾಡುವುದು ನಮ್ಮ ಕರ್ತವ್ಯವಾಗಿದೆ'' ಎಂದು ಹೇಳಿದರು.