ಇಡುಕ್ಕಿ, ಮೇ 12 (DaijiworldNews/MB) : ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ಮಹಿಳೆಯೊಬ್ಬರು ಮಂಗಳವಾರ ಪ್ಯಾಲೆಸ್ತೇನಿಯನ್ ರಾಕೆಟ್ ದಾಳಿಗೆ ಬಲಿಯಾಗಿದ್ದಾರೆ ಎಂದು ಮಹಿಳೆಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅಶ್ಕೆಲೋನ್ನ ನಗರದಲ್ಲಿ ವಾಸಿಸುತ್ತಿದ್ದ 31 ವರ್ಷದ ಸೌಮ್ಯ ಕೇರಳದಲ್ಲಿರುವ ಪತಿ ಸಂತೋಷ್ ಜೊತೆಗೆ ಸಂಜೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾಗ ಸೌಮ್ಯ ನಿವಾಸದ ಮೇಲೆ ರಾಕೆಟ್ ಬಿದ್ದಿದೆ ಎಂದು ಹೇಳಲಾಗಿದೆ.
"ವಿಡಿಯೋ ಕರೆಯ ಸಮಯದಲ್ಲಿ ನನ್ನ ಸಹೋದರನಿಗೆ ದೊಡ್ಡ ಶಬ್ದ ಕೇಳಿಸಿತು. ಇದ್ದಕ್ಕಿದ್ದಂತೆ ಫೋನ್ ಸಂಪರ್ಕ ಕಡಿತವಾಯಿತು. ನಂತರ ನಾವು ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದವರನ್ನು ಸಂಪರ್ಕಿಸಿದ್ದೇವೆ. ಆ ಬಳಿಕ ನಮಗೆ ಈ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ'' ಎಂದು ಮೃತ ಸೌಮ್ಯರ ಪತಿ ಸಂತೋಷ್ನ ಸಹೋದರ ಸಾಜಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದ ಸೌಮ್ಯ ಕಳೆದ ಏಳು ವರ್ಷಗಳಿಂದ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್ನ ಮನೆಯೊಂದರಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು ಎಂದು ಆಕೆಯ ಸಂಬಂಧಿಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಆದರೆ ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕ, ಕೇರಳ ಕಾಂಗ್ರೆಸ್ನ ಮುಖಂಡ ಮಣಿ ಸಿ ಕಪ್ಪನ್ ಈ ಘಟನೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಅವರು, ''ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕೇರಳಿಗರು ಭಯದಿಂದ ಬದುಕುತ್ತಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಬೇಕು'' ಎಂದು ಆಗ್ರಹಿಸಿದ್ದಾರೆ.