ಬೊಗೊಟಾ, ಮೇ 12 (DaijiworldNews/MB) : ಕೊರೊನಾ ಕಾರಣದಿಂದಾಗಿ ಬಡತನ ಮತ್ತು ಅಸಮಾನತೆ ಹೆಚ್ಚಳದ ಹಿನ್ನೆಲೆ ಎರಡು ವಾರಗಳಿಂದ ಕೊಲಂಬಿಯಾದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯುತ್ತಿದ್ದು ಈ ಪ್ರತಿಭಟನೆಯಲ್ಲಿ ಈವರೆಗೆ 42 ಮಂದಿ ಮೃತಪಟ್ಟಿದ್ದು, ಈವರೆಗೆ 168 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಮಾನವ ಹಕ್ಕುಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಪ್ರತಿಭಟನೆಯನ್ನು ತಡೆಯಲು ಪೊಲೀಸರು ಹಿಂಸಾಚಾರ ನಡೆಸಿದ್ದು 40 ಮಂದಿ ಮೃತಪಟ್ಟಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯೂ ಸಾವಿಗೀಡಾಗಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲು ಕೊಲಂಬಿಯಾದ ಪೊಲೀಸರು ಬಲಪ್ರಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಲಂಬಿಯಾ ಸರ್ಕಾರವು ಸಾಮಾಜಿಕ ಮತ್ತು ಆರೋಗ್ಯ ಸೇವೆಗಳಿಗಾಗಿ ಹಣವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ತೆರಿಗೆಯನ್ನು ಅಧಿಕ ಮಾಡಿತ್ತು. ಇದನ್ನು ವಿರೋಧಿಸಿ ಏಪ್ರಿಲ್ 28ರಂದು ಅಲ್ಲಿ ಪ್ರತಿಭಟನೆ ಆರಂಭವಾಗಿದೆ. ದೇಶದ 1 ಕೋಟಿ ಜನರಿಗೆ ಮೂಲ ಆದಾಯ ಯೋಜನೆ ಜಾರಿಗೆ ತರಬೇಕು, ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನು ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಮೇ 2ರಂದು ಸರ್ಕಾರವು ತನ್ನ 6.2 ಶತಕೋಟಿ ಡಾಲರ್ ತೆರಿಗೆ ಯೋಜನೆಯನ್ನು ವಾಪಾಸು ಪಡೆದಿತ್ತು. ಬಳಿಕ ಹಣಕಾಸು ಸಚಿವರು ರಾಜೀನಾಮೆಯನ್ನೂ ನೀಡಿದ್ದರು. ಆದರೆ ಕೊಲಂಬಿಯಾದ ಹಲವೆಡೆ ಪ್ರತಿಭಟನೆಗಳು ಮುಂದುವರಿದಿದೆ.
ಕೊಲಂಬಿಯಾದಲ್ಲಿ ಕೊರೊನಾ ಸೋಂಕಿನಿಂದಾಗಿ 78 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.