ಗಾಜಾಪಟ್ಟಿ, ಮೇ 13 (DaijiworldNews/MS): ಜೆರುಸಲೇಂನಲ್ಲಿರುವ ಅಲ್-ಅಕ್ಸಾ ಮಸೀದಿಯು ಮುಸ್ಲಿಮರು ಹಾಗೂ ಯಹೂದಿಗಳಿಗೆ ಪವಿತ್ರವಾದ ಸ್ಥಳ. ಈ ಮಸೀದಿಯ ಜಾಗದ ವಿಚಾರವಾಗಿ ಉಭಯ ಗುಂಪುಗಳ ನಡುವಿನ ಜಟಾಪಟಿ, ಈಗ ಸಂಘರ್ಷಕ್ಕೆ ತಿರುಗಿದ್ದುಇಸ್ರೇಲ್ ಹಾಗೂ ಪಾಲೆಸ್ಟೈನ್ನ ಹಮಾಸ್ ಬಂಡುಕೋರರ ನಡುವೆ ಆರಂಭವಾದ ಸಂಘರ್ಷ ತೀವ್ರಗೊಂಡಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ನ 10ರಷ್ಟು ಬಂಡುಕೋರ ನಾಯಕರನ್ನು ಹೊಡೆದುರುಳಿಸಲಾಗಿದ್ದು, ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.
ಇದಕ್ಕೆ ಉತ್ತರವಾಗಿ ಪಾಲೆಸ್ಟೈನ್ನ ಹಮಾಸ್ ಬಂಡುಕೋರರು, ಇಸ್ರೇಲ್ ಮೇಲೆ 1,000ಕ್ಕೂ ಹೆಚ್ಚು ರಾಕೆಟ್ ದಾಳಿಯನ್ನು ನಡೆಸಿದೆ. ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವಿನ ಹಿಂಸಾಚಾರದಿಂದ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಶ್ವಸಂಸ್ಥೆ ಹಾಗೂ ಈಜಿಪ್ಟ್ ಅಧಿಕಾರಿಗಳು ಶಾಂತಿ ಕಾಪಾಡುವ ಪ್ರಯತ್ನ ನಡೆಸಿದ್ದರೂ ಸದ್ಯ ಇದ್ಯಾವೂದೂ ಫಲಪ್ರದವಾಗಿಲ್ಲ.
ಸೋಮವಾರದಿಂದೀಚೆಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 16 ಮಕ್ಕಳು, ಐದು ಮಹಿಳೆಯರು ಸೇರಿದಂತೆ ಪ್ಯಾಲೆಸ್ಟೈನ್ನ 65 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಹಮಾಸ್ ಉಗ್ರರ ದಾಳಿಗೆ ಆರು ವರ್ಷದ ಬಾಲಕನೂ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.