ಇಸ್ರೇಲ್, ಮೇ 15 (DaijiworldNews/MB) : ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ವಾಯುದಾಳಿಯನ್ನು ಮುಂದುವರಿಸಿದ್ದು ರಾತ್ರಿಯಿಡೀ ದಾಳಿ ನಡೆಸಿದೆ ಎಂದು ಸೇನೆಯು ಶನಿವಾರ ತಿಳಿಸಿದೆ. ಇಸ್ರೇಲ್ನ ಈ ದಾಳಿಯಿಂದಾಗಿ ಇಸ್ರೇಲ್, ಪ್ಯಾಲೆಸ್ಟೈನ್ನಲ್ಲಿ ಭಾರೀ ಅಶಾಂತಿಯ ವಾತಾವರಣ ಸೃಷ್ಟಿಸಿದ್ದು ಈವರೆಗೂ ಇಸ್ರೇಲ್ನ ವಾಯುದಾಳಿಯಿಂದ ಗಾಜಾದಲ್ಲಿ 126 ಮಂದಿ ಮೃತಪಟ್ಟು, 950 ಜನರಿಗೆ ಗಾಯವಾಗಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಶನಿವಾರ ಐದನೇ ದಿನಕ್ಕೆ ಮುಂದುವರಿದಿದ್ದು, ರಾಕೆಟ್, ಶೆಲ್ ದಾಳಿ ಇದೀಗ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ. ಇನ್ನು ಇಸ್ರೇಲ್ ನಗರದ ಮೇಲೆ ಗಾಜಾದಿಂದಲೂ ರಾಕೆಟ್ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ದಾಳಿಯ ಹೊಣೆಯನ್ನು ಹಮಾಸ್ ಬಂಡುಕೋರರು ಹೊತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನು ಸಾವನ್ನಪ್ಪಿದ 126 ಮಂದಿಯ ಪೈಕಿ 32 ಮಕ್ಕಳು, 21 ಮಹಿಳೆಯರು ಕೂಡಾ ಸೇರಿದ್ದಾರೆ. ಶುಕ್ರವಾರ ಗಾಜಾ ಪಟ್ಟಿ ಪ್ರದೇಶದಲ್ಲಿ ಹಮಾಸ್ ಬಂಡುಕೋರರ ಶಸ್ತ್ರಾಸ್ತ್ರ ಉತ್ಪಾದನೆಯ ಸುರಂಗಗಳ ಮೇಲೆ ಇಸ್ರೇಲ್ ಸೇನೆ ಸಾವಿರಾರು ರಾಕೆಟ್, ಶೆಲ್ ದಾಳಿ ನಡೆಸಿ ಧ್ವಂಸಗೊಳಿಸುವ ಯತ್ನ ನಡೆಸಿದೆ.