ರಾಮಲ್ಲಾ, ಮೇ.16 (DaijiworldNews/PY): ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರು ಗಾಜಾಪಟ್ಟಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ದೂರಾವಾಣಿ ಮುಖೇನ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರು ಅಮೇರಿಕಾ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದು, "ಇಸ್ರೇಲ್ ಪ್ಯಾಲೆಸ್ಟೀನ್ ಜನರ ಮೇಲೆ ಮಾಡುತ್ತಿರುವ ದಾಳಿಯನ್ನು ತಡೆಯಬೇಕು. ಸಂಘರ್ಷ ಶಮನಗೊಳಿಸುವ ಸಲುವಾಗಿ ನೆರವು ನೀಡಬೇಕು" ಎಂದು ಮನವಿ ಮಾಡಿದ್ದಾರೆ.
"ಪ್ಯಾಲೆಸ್ಟೀನ್ ಜನರ ಮೇಲೆ ಇಸ್ರೇಲ್ ಆಕ್ರಮಣವನ್ನು ತಡೆಯಲು ಹಾಗೂ ಕದನ ವಿರಾಮಕ್ಕೆ ನಾಂದಿ ಹಾಡಲು ನಾನು ಕೆಲಸ ಮಾಡುತ್ತಿದ್ದೇನೆ" ಎಂದು ಅಬ್ಬಾಸ್ ಬಿಡೆನ್ ಅವರಿಗೆ ಹೇಳಿದ್ದಾರೆ.
"ಇಸ್ರೇಲ್ ದಾಳಿ ಕೊನೆಗೊಂಡಲ್ಲಿ ಮಾತ್ರವೇ ಶಾಂತಿ ಹಾಗೂ ಸ್ಥಿರತೆ ಸಾಧ್ಯ. ಶಾಂತಿ ಮರುಸ್ಥಾಪನೆಗೆ ಅಮೇರಿಕಾ ಮಧ್ಯಪ್ರವೇಶಿಸಬೇಕು" ಎಂದು ಮಹಮದ್ ಅಬ್ಬಾಸ್ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಡೆನ್, "ಹಿಂಸಾಚಾರ ಕಡಿಮೆಗೊಳಿಸಿ, ಶಾಂತಿ ಸ್ಥಾಪನೆಯ ಸಲುವಾಗಿ ಅಮೇರಿಕಾ ಎಲ್ಲಾ ರೀತಿಯ ರಾಜತಾಂತ್ರಿ ಪ್ರಯತ್ನಗಳನ್ನು ಕೈಗೊಳ್ಳಲಿದೆ" ಎಂದಿದ್ದಾರೆ.