ವಿಶ್ವಸಂಸ್ಥೆ, ಮೇ.20 (DaijiworldNews/PY): ಇಸ್ರೇಲ್ ಹಾಗೂ ಗಾಜಾದ ಹಮಸ್ನ ಉಗ್ರರ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿದ್ದು, ವಿಶ್ವಸಂಸ್ಥೆಯ ಈ ಕ್ರಮಕ್ಕೆ ಅಮೇರಿಕಾ ವಿರೋಧಿಸಿದೆ.
ವಿಶ್ವಸಂಸ್ಥೆಯು ಕದನ ವಿರಾನ ಘೋಷಣೆಗೆ ಸಂಬಂಧಪಟ್ಟಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ಯತ್ನಿಸಿತ್ತಾದರೂ, ಇದಕ್ಕೆ ಅಮೇರಿಕಾ ನಾಲ್ಕು ಬಾರಿ ತಡೆ ನೀಡಿದೆ. ಈ ಬಾರಿ ಫ್ರಾನ್ಸ್ ಕೂಡಾ ಕರಡು ಸಿದ್ದಪಡಿಸಿದೆ. ಕದನ ವಿರಾಮ ಘೋಷಣೆಗೆ ವಿಸ್ವಸಂಸ್ಥೆ ಸಮಿತಿಯ ಇತರೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದ್ದರೂ ಕೂಡಾ ಅಮೇರಿಕಾ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ವಿಶ್ವಸಂಸ್ಥೆಗೆ ಸಮಿತಿಯ ಎಲ್ಲಾ ಸದಸ್ಯರ ಒಪ್ಪಿಗೆ ಅಗತ್ಯವಿದೆ. ಆದರೆ, ನಿರ್ಣಯ ಪ್ರಕಟವಾಗಲು ಕನಿಷ್ಠ ಒಂಭತ್ತು ಮಂದಿಯ ಅನುಮತಿ ಹಾಗೂ ಅಮೇರಿಕಾ ಅಥವಾ ಇತರ ನಾಲ್ಕು ಖಾಯಂ ಸದಸ್ಯರ ರಾಷ್ಟ್ರಗಳು ವಿಟೋ ಬಳಸದೇ ಇರಬೇಕಾಗುತ್ತದೆ.
ಈ ಬಗ್ಗೆ ಫ್ರಾನ್ಸ್ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದು, "ಗಾಜಾದಲ್ಲಿ ಕದನ ವಿರಾಮ ಘೋಷಣೆ ಹಾಗೂ ಪರಿಹಾರ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಅಮೇರಿಕಾದ ಜೊತೆ ವಿಶ್ವಸಂಸ್ಥೆಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ" ಎಂದಿದ್ದಾರೆ.
"ಸಂಘರ್ಷಕ್ಕೆ ಅಂತ್ಯ ಹಾಡಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಭಯೋತ್ಪಾದಕರ ವಿರುದ್ದದ ಹೋರಾಟಕ್ಕೆ ಬೆಂಬಲವಿರುತ್ತದೆ" ಎಂದು ಅಮೇರಿಕಾದ ಅಧಿಕಾರಿಗಳು ವಿಶ್ವಸಂಸ್ಥೆಗೆ ಹೇಳಿವೆ.