ಮಾಸ್ಕೋ, ಮೇ.27 (DaijiworldNews/PY): "ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ನಡುವೆ ರಷ್ಯಾದಲ್ಲಿ ಕೊರೊನಾ ಸೋಂಕು ವಿರುದ್ದ ಪ್ರಾಣಿಗಳಿಗೂ ಲಸಿಕೆ ನೀಡಲು ಆರಂಭಿಸಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಕ್ಕು, ನಾಯಿ, ಮುಂಗುಸಿ ಹಾಗೂ ನರಿಗಳಲ್ಲಿ ಕೊರೊನಾ ವಿರುದ್ದ ರೋಗ ನಿರೋಧಕ ಪ್ರತಿಕಾಯ ಉತ್ಪಾದಿಸಿದೆ ಎಂದು ಸಂಶೋಧನೆಯಲ್ಲಿ ತೋರಿಸಿದ ಬಳಿಕ ಮಾರ್ಚ್ ತಿಂಗಳಿನಲ್ಲಿ ರಷ್ಯಾ ವಿಶ್ವದ ಮೊದಲ ಪ್ರಾಣಿಗಳ ಕಾರ್ನಿವಾಕ್ ಕೋವ್ ಲಸಿಕೆಯನ್ನು ನೋಂದಾಯಿಸಿರುವುದಾಗಿ ಹೇಳಿತ್ತು.
ಈ ಬಗ್ಗೆ ರಷ್ಯಾದ ವೆಟರ್ನರಿ ವಾಚ್ ಡಾಗ್ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ್ದು, "ರಷ್ಯಾದ ಹಲವು ಪ್ರದೇಶಗಳಲ್ಲಿ ಪಶು ಚಿಕಿತ್ಸಾಲಯಗಳಲ್ಲಿ ಇದೀಗ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಿದೆ" ಎಂದಿದೆ.
ಇನ್ನು "ಅರ್ಜೆಂಟೀನಾ ಸೇರಿದಂತೆ ಯುರೋಪಿಯನ್ ಒಕ್ಕೂಟ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಕೂಡಾ ಕಾರ್ನಿವಾಕ್ ಕೋವ್ ಲಸಿಕೆ ಕುರಿತು ಆಸಕ್ತಿ ತೋರಿಸಿದೆ" ಎಂದು ವರದಿ ಹೇಳಿದೆ.
"ಮಾನವನಿಗೆ ಕೊರೊನಾ ಸೋಂಕು ಹರಡುವಲ್ಲಿ ಬೆಕ್ಕು ಹಾಗೂ ನಾಯಿಗಳು ಪ್ರಮುಖವಾದ ಪಾತ್ರ ವಹಿಸುವುದಿಲ್ಲ. ಇದಲ್ಲದೇ, ಕೊರೊನಾ ಪಾಸಿಟಿವ್ ದೃಢಪಟ್ಟವರಿಗೆ ಅವುಗಳ ಲಕ್ಷಣಗಳು ಗಂಭೀರ ಸ್ವರೂಪದ್ದಾಗಿರುವುದಿಲ್ಲ" ಎಂದು ಕೆಲ ವಿಜ್ಞಾನಿಗಳು ಹೇಳಿದ್ದಾರೆ.
"ಕೊರೊನಾ ಸೋಂಕು ಪ್ರಾಣಿಗಳಿಂದ ಮಾನವನಿಗೆ ಹರಡುತ್ತದೆ ಎಂಬ ಕುರಿತು ಸದ್ಯಕ್ಕೆ ಯಾವುದೇ ಪುರಾವೆ ದೊರೆತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ವಿಶ್ವದಾದ್ಯಂತ ವಿವಿಧ ಮಾದರಿಯ ಕೊರೊನಾ ಸೋಂಕು ಪತ್ತೆಯಾಗಿದೆ" ಎಂದು ವರದಿ ವಿವರಿಸಿದೆ.