ಲಂಡನ್, ಮೇ.30 (DaijiworldNews/HR): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರೇಯಸಿ ಕ್ಯಾರಿ ಸೈಮನ್ಸ್ ಜತೆ ವೆಸ್ಟ್ಮಿನಿಸ್ಟರ್ ಕ್ಯಾಥಡ್ರಲ್ನಲ್ಲಿ ರಹಸ್ಯ ಕಾರ್ಯಕ್ರಮವೊಂದರಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದ್ದು, ಇದು ಪ್ರಧಾನಿ ಜಾನ್ಸನ್ಗೆ ಮೂರನೇ ವಿವಾಹವಾಗಿದೆ.
ಈ ಕುರಿತು ಬ್ರಿಟನ್ ಪತ್ರಿಕೆಗಳು ವರದಿ ಪ್ರಕಟಿಸಿದ್ದು, ಲಂಡನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಿ ಕರೆಸಿಕೊಳ್ಳಲಾಯಿತು, ಪ್ರಧಾನಿ ಜಾನ್ಸನ್ ಅವರ ಕಚೇರಿಯ ಹಿರಿಯ ಸದಸ್ಯರಿಗೂ ಮದುವೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.
ಇನ್ನು ಎರಡನೇ ಪತ್ನಿ ಮರೀನಾ ವೀಲರ್ ಜತೆ ವಿವಾಹ ವಿಚ್ಚೇದನ ಪಡೆದ ಬಳಿಕ, ಜಾನ್ಸನ್ (56) ಮತ್ತು ಸೈಮನ್ಸ್ (33) 2019ರಿಂದ ಡೌನಿಂಗ್ ಸ್ಟ್ರೀಟ್ನಲ್ಲಿ ಸಹಜೀವನ ನಡೆಸುತ್ತಿದ್ದರು. ಕಳೆದ ವರ್ಷ ಅವರಿಬ್ಬರೂ ನಿಶ್ಚಿತಾರ್ಥದ ಕುರಿತು ಘೋಷಿಸಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.
ಬೋರಿಸ್ ಜಾನ್ಸನ್ಗೆ ಕೊರೊನಾ ದೃಢಪಟ್ಟು ಗುಣಮುಖರಾದ ಬಳಿಕ ಸೈಮನ್ಸ್ ಅವರು ಏಪ್ರಿಲ್ 2020ರಲ್ಲಿ ಪುತ್ರ ವಿಲ್ಫ್ರೆಡ್ ಲಾರಿ ನಿಕೊಲಾಸ್ ಜಾನ್ಸನ್ಗೆ ಜನ್ಮ ನೀಡಿದ್ದರು.