ನಜರೆತ್, ಮೇ.30 (DaijiworldNews/HR): ಇಂಡಿಯನ್ ಚಾಪ್ಲಿನ್ಸಿ ಕೊಂಕಣಿ ಕಮ್ಯುನಿಟಿ ಇವರ ನೇತೃತ್ವದಲ್ಲಿ ಏಸುಕ್ರಿಸ್ತರು ಬೆಳೆದುಬಂದ ನಜರೆತ್ ನಗರದಲ್ಲಿ ಪವಿತ್ರ ಬಲಿ ಪೂಜೆಯನ್ನು ಶನಿವಾರದಂದು ಆಯೋಜಿಸಲಾಯಿತು.
ಇಂಡಿಯನ್ ಚಾಪ್ಲಿನ್ಸಿ ಕೊಂಕಣಿ ಕಮ್ಯುನಿಟಿ ಇವರ ಇಂಚಾರ್ಜ್ ಆದ ಗುರುಗಳಾದ ಸಂತೋಷ್ ಲೋಬೋ ಇವರ ಮುಂದಾಳತ್ವದಲ್ಲಿ ಹಾಗೂ ಪೂಜ್ಯ ಗುರುಗಳಾದ ಡೊಮಿನಿಕ್ ಮೆಂಡೋನ್ಸ ಇವರ ಸಹಕಾರದೊಂದಿಗೆ ಭಾರತ ದೇಶದ ಕೊಂಕಣಿ ಕ್ರಿಶ್ಚಿಯನ್ ಸಮುದಾಯದ ಜನರು ನಜರೆತ್ ನಗರದಲ್ಲಿ ಒಟ್ಟು ಸೇರಿದರು.
ಈ ವರುಷ ಸಂತ ಜೋಸೆಫರಿಗೆ ಸಮರ್ಪಿಸಿದರಿಂದ ಮೊದಲಿಗೆ ಸಂತ ಜೋಸೆಫರ ಇಗರ್ಜಿಯ ಬಳಿ ಸೈಂಟ್ ಜೋಸೆಫ್ ನೋವೆನಾ ಮಾಡಿ, ನಂತರ ಮಾತೆ ಮರಿಯಮ್ಮರಿಗೆ ಆರಾಧನೆ ಮೆರವಣಿಗೆ ಹಾಗೆಯೇ, ದೇವಾಲಯದಲ್ಲಿ ಭಕ್ತಿ ಪೂರ್ವ ರೊಸರಿ ಮತ್ತು ಕೊಂಕಣಿಯಲ್ಲಿ ಸಂಭ್ರಮಿಕ ಪವಿತ್ರ ಬಲಿ ಪೂಜೆಯನ್ನು ಅರ್ಪಿಸಿದರು.
ಇನ್ನು ಬಲಿ ಪೂಜೆಗೆ ಸರಿ ಸುಮಾರು 900ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಪೂಜೆಯಲ್ಲಿ ಪ್ರತ್ಯೇಕವಾಗಿ ಭಾರತ ದೇಶ ಕೊರೊನಾ ರೋಗದಿಂದ ಮುಕ್ತವಾಗಲು ಹಾಗೂ ಇಸ್ರೇಲ್ ಮತ್ತು ಪಾಲೇಸ್ತಿನ್ ಮಧ್ಯೆ ಶಾಂತಿ ಸಮಾಧಾನ ನೆಲೆಸುವ ಸಲುವಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.