ದುಬೈ, ಮೇ 30 (DaijiworldNews/SM): ಕರೋನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಒಂದೆಡೆ ವಿವಿಧ ರೀತಿಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ನಡುವೆ ದುಬೈ ಎಮಿರೇಟ್ಸ್ ಏರ್ವೇಸ್ ಸಂಸ್ಥೆಯ ದುಬೈನಿಂದ ಭಾರತಕ್ಕೆ ತನ್ನ ಎಲ್ಲಾ ವಿಮಾನ ಹಾರಾಟಗಳನ್ನು ಜೂನ್ 30 ರವರೆಗೆ ಸ್ಥಗಿತಗೊಳಿಸಿ ಆದೇಶ ನೀಡಿದೆ.
ಈ ಮೊದಲು ವಿಮಾನಯಾನ ಸಂಸ್ಥೆ ಭಾರತದಿಂದ ಜೂನ್ 14 ರವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಿ ಆದೇಶ ನೀಡಿತ್ತು. ಇದೀಗ ಮತ್ತೆ ವಿಸ್ತರಣೆಗೊಳಿಸಿದೆ. ಆ ಮೂಲಕ ಏಪ್ರಿಲ್ 24ರಿಂದ ಜಾರಿಯಲ್ಲಿರುವ ಭಾರತದಿಂದ ಎಮಿರೇಟ್ಸ್ ನ ವಿಮಾನಗಳ ಹಾರಾಟ ಸ್ಥಗಿತ ಜೂನ್ 30 ರವರೆಗೆ ಮುಂದುವರಿಯಲಿದೆ ಎಂದು ವಿಮಾನಯಾನ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೆ, ಕಳೆದ 14 ದಿನಗಳಲ್ಲಿ ಭಾರತದಿಂದ ತೆರಳಿದ ಪ್ರಯಾಣಿಕರನ್ನು ಬೇರೆ ಯಾವುದೇ ಸ್ಥಳದಿಂದ ಯುಎಇಗೆ ಪ್ರಯಾಣಿಸಲು ಬಿಡುವುದಿಲ್ಲ ಎಂದು ಅದು ಹೇಳಿದೆ. ಈ ನಡುವೆ ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾಗಳನ್ನು ಹೊಂದಿರುವವರು ಮತ್ತು ಪರಿಷ್ಕೃತ ಪ್ರಕಟಿತ ಕೋವಿಡ್ -19 ಪ್ರೋಟೋಕಾಲ್ ಗಳನ್ನು ಅನುಸರಿಸುವ ರಾಜತಾಂತ್ರಿಕ ಕಾರ್ಯಾಚರಣೆಗಳ ಸದಸ್ಯರನ್ನು ಪ್ರಯಾಣಕ್ಕೆ ವಿನಾಯಿತಿ ನೀಡಲಾಗುತ್ತದೆ.
ರದ್ದಾದ ಬುಕಿಂಗ್ಗೆ ಸಂಬಂಧಿಸಿದಂತೆ, ಪ್ರಯಾಣಿಕರು ಮುಂದಿನ ದಿನಗಳಲ್ಲಿ ವಿಮಾನಗಳಿಗಾಗಿ ತಮ್ಮ ಟಿಕೆಟ್ ಇರಿಸಿಕೊಳ್ಳಲು ಆಯ್ಕೆ ಮಾಡಬಹುದಾಗಿದೆ ಅಥವಾ ಇನ್ನೊಂದು ದಿನಾಂಕದಂದು ರೀ ಬುಕ್ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆಗಾಗಿ ತಮ್ಮ ಟಿಕೆಟ್ಗಳನ್ನು ಇರಿಸಿಕೊಳ್ಳಲು ಬಯಸುವ ಪ್ರಯಾಣಿಕರು ಇದೀಗ ವಿಮಾನಯಾನ ಸಂಸ್ಥೆಗೆ ಕರೆ ಮಾಡಬೇಕಾಗಿಲ್ಲ. ಅವರು ಪ್ರಯಾಣಿಸಲು ಸಿದ್ಧವಾದಾಗ ತಮ್ಮ ಬುಕಿಂಗ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.