ನೈಪಿತಾವ್, ಜೂ.01 (DaijiworldNews/HR): ಮ್ಯಾನ್ಮಾರ್ನಲ್ಲಿ ಸೇನೆಯು ಆಡಳಿತಕ್ಕೆ ಬಂದು ನಾಲ್ಕು ತಿಂಗಳು ಪೂರ್ಣಗೊಂಡಿದ್ದರೂ, ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಿ, ಶಾಂತಿ ಸ್ಥಾಪಿಸಲು ಸೇನೆಯು ವಿಫಲವಾಗಿದೆ.
ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ಫೆಬ್ರುವರಿ 1 ರಂದು ದಂಗೆ ಎದ್ದಿದ್ದ ಮ್ಯಾನ್ಮಾರ್ ಸೇನೆಯು ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆಂಗ್ ಸಾನ್ ಸೂಕಿ ಸೇರಿದಂತೆ ಇತರೆ ಹಿರಿಯ ನಾಯಕರನ್ನು ಬಂಧಿಸಿತು. ಇದನ್ನು ವಿರೋಧಿಸಿ ಈಗ ಕೂಡ ಪ್ರತಿಭಟನೆಗಳು ಮುಂದುವರಿದಿವೆ.
ಇನ್ನು ಮ್ಯಾನ್ಮಾರ್ನ ದಕ್ಷಿಣ ಭಾಗದ ಲಾಂಗ್ ಲೊನ್ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಜನರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದು, ಯಾಂಗೂನ್ ನಗರದ ಯುವ ಗುಂಪೊಂದು ಕಮಯುತ್ ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ನಡೆಸಿದೆ.
ಮತ್ತೊಂದೆಡೆ ಸೇನೆ ಮತ್ತು ಗಡಿ ಪ್ರದೇಶಗಳಲ್ಲಿರುವ ಬುಡಕಟ್ಟು ಅಲ್ಪಸಂಖ್ಯಾತ ಸೇನೆಯ ನಡುವಿನ ದಶಕಗಳ ಸಂಘರ್ಷವು ಇನ್ನಷ್ಟು ತೀವ್ರಗೊಂಡಿದ್ದು, ನಾಗರಿಕ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬುಡಕಟ್ಟು ಅಲ್ಪಸಂಖ್ಯಾತ ಸೇನೆಯು ಮ್ಯಾನ್ಮಾರ್ನ ಮಿಲಿಟರಿ ಮೇಲೆ ದಾಳಿ ನಡೆಸುತ್ತಿದೆ.