ಅಮೆರಿಕಾ, ಜೂ 05 (DaijiworldNews/MS): ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಫೇಸ್ ಬುಕ್ ಸಂಸ್ಥೆ 2 ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಅಮೆರಿಕಾದ ಕ್ಯಾಪಿಟಲ್ ಕಟ್ಟಡದದ ಮೇಲೆ ಜನವರಿ 6ರಂದು ನಡೆದ ದಂಗೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಗಳು ಪ್ರಚೋನಕಾರಿಯಾಗಿದ್ದವು. ಇದು ಫೇಸ್ ಬುಕ್ ಸಂಸ್ಥೆಯ ಹೊ ಸ ನಿಯಮಾವಳಿಗಳನ್ನು ಮುರಿದಿದೆ ಎಂದು 2023ರ ಜನವರಿವರೆಗೆ ಅಮಾನತು ಮಾಡಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಫೇಸ್ಬುಕ್ನಲ್ಲಿ ಟ್ರಂಪ್ರ ಅಮಾನತು ಎಂದರೆ ಅವರ ಖಾತೆಯು ಮೂಲಭೂತವಾಗಿ 'ಫೇಸ್ಬುಕ್ ಜೈಲಿನಲ್ಲಿದ್ದಂತೆ. ಅಲ್ಲಿ ಇತರರು ಹಿಂದಿನ ಪೋಸ್ಟ್ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದಾಗಿದೆ. ಆದರೆ ಖಾತೆಯಲ್ಲಿ ವಿಷಯಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಫೇಸ್ ಬುಕ್ ಟ್ರಂಪ್ ಖಾತೆಯನ್ನು ಅಮಾನತು ಮಾಡಿದ್ದರೆ ಟ್ವಿಟರ್ ಮಾತ್ರ ಶಾಶ್ವತವಾಗಿ ಅವರ ಖಾತೆಯನ್ನು ಅಳಿಸಿ ಹಾಕಿದೆ.
ಟ್ರಂಪ್ ಅವರ ಅಮಾನತು ಜನವರಿಯಲ್ಲಿ ಆರಂಭವಾಗಿದ್ದು, ಷರತ್ತುಗಳು ಅನುಮತಿಸಿದರೆ ಮಾತ್ರ ಅದನ್ನು ಪುನಃ ಸ್ಥಾಪಿಸಲಾಗುವುದು ಎಂದು ಫೇಸ್ಬುಕ್ನ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ಶುಕ್ರವಾರ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಟ್ರಂಪ್ ಖಾತೆಯನ್ನು ಅಮಾನತು ಮಾಡಿರುವ ಫೇಸ್ ಬುಕ್ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ರಿಪಬ್ಲಿಕನ್ ಶಾಸಕರು, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನ್ಯಾಯವಾದಿಗಳು ಟ್ರಂಪ್ ಖಾತೆ ಮೇಲಿನ ನಿರ್ಬಂಧವನ್ನು ವಿರೋಧಿಸಿದ್ದಾರೆ.