ಟೇಲ್ ಅವೀವ್, ಜೂ.06 (DaijiworldNews/HR): ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಅಲ್ ಜಜೀರಾ ಪರ್ತಕರ್ತೆ ಗಿವಾರ ಬುಡೆರಿ ಎಂಬುವರು ಇಸ್ರೇಲ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ವರದಿ ಮಾಡುತ್ತಿದ್ದಾಗ ಸ್ಥಳೀಯ ಪೊಲೀಸರು ಭಾನುವಾರ ಅವರನ್ನು ಬಂಧಿಸಿದ್ದು, ಘಟನೆ ಖಂಡಿಸಿ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗುತ್ತಲೇ ಪೊಲೀಸರು ಪತ್ರಕರ್ತೆಯನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರಕರ್ತೆ ಗಿವಾರ ಬುಡೆರಿಯು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ತಮ್ಮ ಗುರುತು ಸಾಬೀತು ಮಾಡಲು ನಿರಾಕರಿಸಿದರು ಎಂದು ಇಸ್ರೇಲ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇನ್ನು ಪತ್ರಕರ್ತೆಯನ್ನು ನಾಲ್ಕೈದು ಮಂದಿ ಪೊಲೀಸರು ಎಳೆದು ಕಾರಿನಲ್ಲಿ ಕೂರಿಸುತ್ತಿರುವ ವಿಡಿಯೊ ಸದ್ಯ ವಿಶ್ವದಾದ್ಯಂತ ವೈರಲ್ ಆಗಿದ್ದು, ವರದಿಗಾರ್ತಿಯ ಕ್ಯಾಮೆರಾವನ್ನು ಪೊಲೀಸರು ಧ್ವಂಸ ಮಾಡಿದ್ದಾರೆ ಎಂದು ವರದಿಯಾಗಿದೆ.
ಬಂಧನವಾದ ಕೆಲ ಗಂಟೆಗಳ ನಂತರ ಪತ್ರಕರ್ತೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಪ್ರತಿಭಟನೆಗಳು ನಡೆಯುತ್ತಿರುವ ಶೇಖ್ ಜರ್ರಾ ಪ್ರದೇಶವನ್ನು ಪ್ರವೇಶಿಸದಂತೆ ಪತ್ರಕರ್ತೆ ಬುಡೇರಿ ಅವರಿಗೆ 15 ದಿನ ನಿಷೇಧ ವಿಧಿಸಲಾಗಿದೆ ಎನ್ನಲಾಗಿದೆ.