ಇಸ್ಲಾಮಾಬಾದ್, ಜೂ.07 (DaijiworldNews/HR): ಎರಡು ಪ್ರಯಾಣಿಕ ರೈಲುಗಳು ಪರಸ್ಪರ ಢಿಕ್ಕಿ ಹೊಡೆದು 30ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಅಪಘಾತ ದಕ್ಷಿಣ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಅವಘಡ ಸಂಭವಿಸಿದ ಬಳಿಕ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿರುವುದು ಹಾಗೂ ಬೋಗಿಗಳ ನಡುವೆ ಪ್ರಯಾಣಿಕರು ಸಿಲುಕಿರುವುದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಕಾಡುತ್ತಿದೆ ಎನ್ನಲಾಗಿದೆ.
ಇನ್ನು ಬೋಗಿಯೊಂದರಲ್ಲಿ 25 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೆತಿ ಹಾಗೂ ದಹಾರ್ಕಿ ಎಂಬರೈಲು ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದ್ದು, ಹಳಿ ತಪ್ಪಿದ ಕಾರಣ ನಿಂತಿದ್ದ ಮಿಲ್ಲಾತ್ ಎಕ್ಸ್ಪ್ರೆಸ್ಗೆ ಸಗೋರ್ಧಾಗೆ ಹೊರಟಿದ್ದ ಸರ್ ಸೈಯದ್ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.