ಇಸ್ಲಮಾಬಾದ್, ಜೂ 12 (DaijiworldNews/PY): ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ ಜಾಧವ್ ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ವಿರುದ್ದ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವುದಕ್ಕೆ ಕೇಂದ್ರ ಸರ್ಕಾರ ಸಂತಸ ವ್ಯಕ್ತಪಡಿಸಿದೆ.
ಈ ಸಂಬಂಧ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ಕುಲಭೂಷಣ ಜಾಧವ್ ಅವರಿಗೆ ತಟಸ್ಥ ಕಾನೂನು ಸಂಸ್ಥೆ ಅಥವಾ ಭಾರತೀಯ ವಕೀಲರ ಮುಖೇನ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದಿದೆ. ಇಲ್ಲವಾದಲ್ಲಿ ಈ ಅವಕಾಶಕ್ಕೆ ಅರ್ಥ ಇಲ್ಲದಂತಾಗುತ್ತದೆ ಎಂದು ಸರ್ಕಾರ ಹೇಳಿದೆ.
ಪಾಕ್ ಸರ್ಕಾರಕ್ಕೆ, ಅಂತರಾಷ್ಟ್ರೀಯ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದರೂ ಕೂಡಾ, ಈ ಬಗ್ಗೆ ಯಾವುದೇ ರೀತಿಯಾದ ಕ್ರಮ ತೆಗೆದುಕೊಂಡಿರಲಿಲ್ಲ. ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು.
ಪಾಕ್ ಸಂಸತ್ನ ನ್ಯಾಶನಲ್ ಅಸೆಂಬ್ಲಿ ಕುಲಭೂಷಣ ಜಾಧವ್ ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ವಿರುದ್ದ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ಗುರುವಾರ ಒಪ್ಪಿಗೆ ಸೂಚಿಸಿತ್ತು.