ನ್ಯೂಯಾರ್ಕ್, ಜೂ 12 (DaijiworldNews/PY): ಮುಸ್ಲಿಮರನ್ನು ಸೆರೆಯಲ್ಲಿಡುವ ಸಲುವಾಗಿ ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲುಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ತನಿಖಾ ವರದಿ ಪ್ರಕಟಿಸುವ ಮುಖೇನ ಚೀನಾದ ಕ್ರಮವನ್ನು ವಿಶ್ವಕ್ಕೆ ತಿಳಿಸಿದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅವರು ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಗೆ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಮೇಘಾ ರಾಜಗೋಪಾಲನ್ ಅವರು ಬಝ್ಫೀಡ್ ನ್ಯೂಸ್‘ ಎಂಬ ಸುದ್ದಿಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೇಘಾ ರಾಜಗೋಪಾಲನ್ ಅವರು ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲುಗಳನ್ನು ನಿರ್ಮಾಣ ಮಾಡಿ ಹಾಗೂ ಸಾಮೂಹಿಕ ತಡೆ ಶಿಬಿರಗಳನ್ನು ಮಾಡಿ ಅದರಲ್ಲಿ ಮಕ್ಕಳು ಹಾಗೂ ಲಕ್ಷಾಂತರ ಮುಸ್ಲಿಮರನ್ನು ಬಂಧಿಸಿಟ್ಟಿದ್ದ ವಿಚಾರದ ಬಗ್ಗೆ ತಮ್ಮ ವಿಶಿಷ್ಟವಾದ ರೀತಿಯ ತನಿಖಾ ವರದಿಗಳ ಮೂಲಕ ತಿಳಿಸಿದ್ದರು. ಇವರ ಷಿನ್ಜಿಯಾಂಗ್ ಪ್ರಾಂತ್ಯದ ಸುದ್ದಿಗಳ ಸರಣಿಗಾಗಿ ಮೇಘಾ ಅವರು ಅಂತರಾಷ್ಟ್ರೀಯ ವರದಿವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಟಂಪಾ ಬೇ ಟೈಮ್ಸ್ನ ತನಿಖಾ ವರದಿಗಾರ ನೀಲ್ ಬೇಡಿ ಅವರು ಸ್ಥಳೀಯ ವರದಿಗಾಗಿ ಪುಲಿಟ್ಜರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.