ಬೀಜಿಂಗ್, ಜೂ 13 (DaijiworldNews/PY): ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಭಾನುವಾರ ಅನಿಲ ಸ್ಪೋಟಗೊಂಡು 11 ಮಂದಿ ಮೃತಪಟ್ಟು, 37 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.
ಶಿಯಾನ್ ನಗರದ ಜಾಂಗ್ವಾನ್ ಜಿಲ್ಲೆಯಲ್ಲಿ ಬೆಳಗ್ಗೆ 6.30 ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಅನೇಕ ಕಟ್ಟಡಗಳು ಹಾನಿಗೊಂಡಿವೆ. ಸ್ಫಟದಲ್ಲಿ 11 ಮಂದಿ ಮೃತಪಟ್ಟಿದ್ದು, 37 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಅನೇಕ ನಿವಾಸಿಗಳು ಉಪಹಾರ ಸೇವಿಸುತ್ತಿದ್ದರು, ಕೆಲವು ಮಂದಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿದ್ದ ಸಂದರ್ಭ ಸ್ಪೋಟ ಸಂಭವಿಸಿದೆ ಎಂದು ಹಾಂಗ್ ಕಾಂಗ್ ಮೂಲದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಘಟನೆಯಲ್ಲಿ ಅನೇಕ ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ನಗರದ ಮುನ್ಸಿಪಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ರಕ್ಷಣಾ ಸಿಬ್ಬಂದಿಗಳು ತೊಡಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆ ಕುರಿತು ತನಿಖೆ ಮುಂದುವರೆದಿದೆ.