ವಾಷಿಂಗ್ಟನ್, ಜೂ 13 (DaijiworldNews/PY): "ಕೊರೊನಾ ವೈರಸ್ನ ಮೂಲದ ಪತ್ತೆಗಾಗಿ ನಡೆಯುತ್ತಿರುವ ತನಿಖೆಗೆ ಚೀನಾದ ಸಹಕಾರ ಮುಖ್ಯ" ಎಂದು ಡಬ್ಲ್ಯೂಹೆಚ್ಒನ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್ ತಿಳಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಜಿ7ನ ಸಮ್ಮೇಳನದ ವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ಕೊರೊನಾ ವೈರಸ್ ಮೂಲ ಪತ್ತೆ ತನಿಖೆಯ ಮುಂದಿನ ಹಂತದ ಸಂದರ್ಭ ಚೀನಾದ ಸಹಕಾರ ಅಗತ್ಯ" ಎಂದಿದ್ದಾರೆ.
"ತನಿಖೆಯ ಮುಂದಿನ ಹಂತಕ್ಕೆ ಸಿದ್ದತೆ ಮಾಡಲಾಗುತ್ತಿದ್ದು, ನಮಗೆ ಚೀನಾದ ಕಡೆಯಿಂದ ಸಹಕಾರ ಮುಖ್ಯ. ವೈರಸ್ನ ಮೂಲದ ಪತ್ತೆ ಮಾಡಲು ಪಾರದರ್ಶಕತೆಯನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಈ ವಾರದ ಪ್ರಾರಂಭದಲ್ಲಿ ಅಮೇರಿಕಾ ಸೇರಿದಂತೆ ಇಂಗ್ಲೆಂಡ್, ಡಬ್ಲ್ಯೂಹೆಚ್ಒದ ಸಮಯೋಚಿತ, ಪಾರದರ್ಶಕ ಹಾಗೂ ಸಾಕ್ಷ್ಯಾಧಾರ ಸಹಿತ ಸ್ವತಂತ್ರ ತನಿಖೆಗೆ ಸಂಪೂರ್ಣವಾದ ಬೆಂಬಲ ನೀಡುವುದಾಗಿ ತಿಳಿಸಿದ್ದವು.
2019ರ ಅಂತ್ಯದ ವೇಳೆ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದಲ್ಲಿ ಪತ್ತೆಯಾಗಿತ್ತು. "ಕೊರೊನಾ ವೈರಸ್ನ ಮೂಲ ಪತ್ತೆಗಾಗಿ ತನಿಖೆ ಕೈಗೊಳ್ಳಲು ಇನ್ನಷ್ಟು ಪ್ರಯತ್ನ ಮಾಡಬೇಕು" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಅಮೇರಿಕಾದ ಗುಪ್ತಚರ ಇಲಾಖೆಗೆ ಇತ್ತೀಚೆಗೆ ತಿಳಿಸಿದ್ದರು.