ನವದೆಹಲಿ, ಜೂ.15 (DaijiworldNews/HR): ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿ ಅವರ ವಿರುದ್ಧದ ವಿಚಾರಣೆಯನ್ನು ಜೂನ್ 25ಕ್ಕೆ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದೂಡಿಕೆ ಮಾಡಿದೆ.
ಮೆಹುಲ್ ಚೋಕ್ಸಿ ಅವರು ಮಾನಸಿಕ ಒತ್ತಡ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವ ಬಗ್ಗೆ ಡೊಮಿನಿಕಾ ಚೀನಾ ಫ್ರೆಂಡ್ಶಿಪ್ ಹಾಸ್ಪಿಟಲ್ನ ವೈದ್ಯರು ನೀಡಿರುವ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಇದೀಗ ಚೋಕ್ಸಿ ಆಸ್ಪತ್ರೆಯಲ್ಲಿ ಪೊಲೀಸರ ಕಣ್ಗಾವಲಿನಲ್ಲಿದ್ದಾರೆ.
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ13,500 ಕೋಟಿ ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದು, ಆ ಬಳಿಕ ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು.
ಚೋಕ್ಸಿಯನ್ನು ಭಾರತಕ್ಕೆ ಕರೆ ತರಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.