ಕಠ್ಮಂಡು, ಜೂ 17 (DaijiworldNews/MS): ಧಾರಾಕಾರ ಮಳೆ ಮತ್ತು ಮೇಘಸ್ಫೋಟದಿಂದಾಗಿ ಹಿನ್ನಲೆಯಲ್ಲಿ ನೇಪಾಳ ಸಿಂಧುಪಾಲಚೋಕ್ ಪ್ರಾಂತ್ಯದಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ದುರಂತದಲ್ಲಿ 7 ಮಂದಿ ಸಾವನ್ನಪ್ಪಿ 3 ಭಾರತೀಯರೂ ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕಳೆದ 48 ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಮಧ್ಯ ನೇಪಾಳದ ಸಿಂಧುಪಾಲಚೋಕ್ ಪ್ರಾಂತ್ಯ ತತ್ತರಿಸಿ ಹೋಗಿದೆ. ರಾಜಧಾನಿ ಕಠ್ಮಂಡುವಿನಿಂದ 65 ಕಿ.ಮೀ ದೂರದಲ್ಲಿರುವ ಈ ಪ್ರಾಂತ್ಯದ ಮೇಲಮ್ಚಿ ಟೌನ್ ನಲ್ಲಿ 200 ಮನೆಗಳು ಪ್ರವಾಹಕ್ಕೆ ಆಹುತಿಯಾಗಿದ್ದು, ವಿವಿಧ ದುರ್ಘಟನೆಗಳಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ತಡರಾತ್ರಿ 7 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಕನಿಷ್ಠ 50 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಎಲ್ಲರೂ ಇದೇ ಮೇಲಮ್ಚಿ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ತಿಳಿದುಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ಶೇರ್ ಬಹದ್ದೂರ್ ತಮಂಗ್ ಅವರು ಮಾಹಿತಿ ನೀಡಿದ್ದು, ಮೆಲಮ್ಚಿ ಮತ್ತು ಇಂದ್ರಾವತಿ ನದಿಗಳ ಪ್ರವಾಹದಲ್ಲಿ 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಮೆಲಮ್ಚಿ ಕುಡಿಯುವ ನೀರಿನ ಯೋಜನೆ, ಟಿಂಬು ಬಜಾರ್, ಚಾನೌಟೆ ಬಜಾರ್, ತಲಮರಂಗ್ ಬಜಾರ್ ಮತ್ತು ಮೆಲಮ್ಚಿ ಬಜಾರ್ನಲ್ಲೂ ಅಣೆಕಟ್ಟಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಮೆಲಮ್ಚಿ ನದಿಯುದ್ದಕ್ಕೂ ಹಳ್ಳಿಗಳಲ್ಲಿನ 300 ಕ್ಕೂ ಹೆಚ್ಚು ಗುಡಿಸಲುಗಳು ನಾಶವಾಗಿವೆ. ಲ್ಯಾಮ್ಜಂಗ್ ಜಿಲ್ಲೆಯಲ್ಲಿ ಸುಮಾರು 15 ಮನೆಗಳು ಕೊಚ್ಚಿ ಹೋಗಿವೆ. ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಸುಮಾರು 200 ಮನೆಗಳಿಗೆ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.