ಬೀಜಿಂಗ್, ಜೂ 18 (DaijiworldNews/PY): ಚೀನಾದ ಕಬ್ಬಿಣದ ಅದಿರಿನ ಗಣಿ ಕುಸಿದ ಪರಿಣಾಮ ಗಣಿಯಲ್ಲಿ ಸಿಲುಕಿ 13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ.
ಡಾಯಂಗ್ಸಿ ಗಣಿಯ ಆಳ ಪ್ರದೇಶದೊಳಗೆ ಕಳೆದ ಒಂದು ವಾರದ ಹಿಂದೆ ಅದಿರು ಕುಸಿದು 13 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು, ಕಳೆದ ಆರು ದಿನಗಳಿಂದ ಇವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, 13 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಘಟನೆ ಜೂನ್ 7ರಂದು ನಡೆದಿದ್ದರೂ, ಗಣಿಯಲ್ಲಿ ಸಿಲುಕಿದ್ದ 13 ಮಂದಿ ಕಾರ್ಮಿಕರನ್ನು ರಕ್ಷಿಸಲು ಸತತ ಏಳು ದಿನಗಳ ಕಾಲ ಮ್ಯಾರಥಾನ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 1,084 ತಜ್ಞರು ಸೇರಿದಂತೆ ನೂರಾರು ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದರೂ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಗಣಿ ಪ್ರಾಧಿಕಾರದ 13 ಮಂದಿಯನ್ನು ವಶಕ್ಕೆ ಪಡೆದುಕೊಂಡು ಅವರ ಮೇಲೆ ಮೊಕದ್ದಮೆ ದಾಖಲಿಸಿಲಾಗಿದ್ದು, ಸರ್ಕಾರ ತನಿಖೆ ಕೈಗೊಳ್ಳಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.