ಆಟಿಂಗೋವಾ, ಜೂ 18 (DaijiworldNews/PY): "ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಪೊಲೀಸ್ ಕಸ್ಟಡಿಯಿಂದ ಜೈಲಿಗೆ ಸ್ಥಳಾಂತರಿಸಿ ಎಂದು ಆದೇಶಿಸಿದೆ. ಆದರೆ, ಅವರ ಆರೋಗ್ಯ ಹದಗೆಟ್ಟಿರುವ ಕಾರಣದಿಂದ ಅವರು ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ" ಎಂದು ಚೋಕ್ಸಿ ಪರ ವಕೀಲ ಹೇಳಿದ್ದಾರೆ.
"ಮೆಹುಲ್ ಚೋಕ್ಸಿ ಅವರ ಆರೋಗ್ಯ ಹದಗೆಟ್ಟಿರುವ ಕಾರಣದಿಂದ ಅವರು ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ" ಎಂದು ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ.
ಚೋಕ್ಸಿ ಅವರ ವೈದ್ಯಕೀಯ ಪ್ರಮಾಣಪತ್ರವನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಸದ್ಯ ಚೋಕ್ಸಿ ಅವರು ಡೊಮಿನಿಕಾ ಚೀನಾ ಫ್ರೆಂಡ್ಶಿಪ್ ಆಸ್ಪತ್ರೆಯಲ್ಲಿ ಮಾನಸಿಕ ಒತ್ತಡ ಹಾಗೂ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿ ಅವರ ವಿರುದ್ಧದ ವಿಚಾರಣೆಯನ್ನು ಜೂನ್ 25ಕ್ಕೆ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದೂಡಿದೆ.
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂ. ವಂಚಿಸಿದ ಆರೋಪ ಹೊತ್ತುಕೊಂಡಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದು, ಆ ಬಳಿಕ ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದರು.
ತನಿಖಾ ಸಂಸ್ಥೆಗಳು ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಕರೆ ತರಲು ಪ್ರಯತ್ನಿಸುತ್ತಿವೆ.