ಉತ್ತರ ಕೊರಿಯಾ, ಜೂ 21 (DaijiworldNews/PY): ಉತ್ತರ ಕೊರಿಯಾದಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದ್ದು, ಉತ್ತರ ಕೊರೊಯಾದ ಪ್ರಜೆಗಳು ಒಂದು ಕೆ.ಜಿ ಬಾಳೆಹಣ್ಣಿಗೆ 3,336 ರೂ.,ಒಂದು ಪ್ಯಾಕೆಟ್ ಬ್ಲಾಕ್ ಟೀಗೆ 5,617 ರೂ.,ಕಾಫಿಗೆ 7,381 ರೂ.ಮತ್ತು ಒಂದು ಕೆಜಿ ಕಾರ್ನ್ ಗೆ 204.81 ರೂ. ಪಾವತಿಸುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಸುದ್ದಿಸಂಸ್ಥೆಯೊಂದು ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಗಡಿ ಮುಚ್ಚುವಿಕೆ, ಅಂತರಾಷ್ಟ್ರೀಯ ನಿರ್ಬಂಧಗಳು ಹಾಗೂ ಅತಿಯಾದ ನೆರೆ ಹಾವಳಿ ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ.
ಕಳೆದ ವರ್ಷ ಚಂಡಮಾರುತದಿಂದ ಉಂಟಾದ ಹಾನಿಯಿಂದಾಗಿ ಕೃಷಿ ವಲಯವು ತನ್ನ ಧಾನ್ಯ ಉತ್ಪಾದನಾ ಯೋಜನೆಯನ್ನು ಪೂರೈಸಲು ವಿಫಲವಾದ ಕಾರಣ ಜನರು ಆಹಾರ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಆಹಾರ ಸೇರಿದಂತೆ ರಸಗೊಬ್ಬರ ಹಾಗೂ ಇಂಧನಗಳಿಗಾಗಿ ಉತ್ತರ ಕೊರಿಯಾ ಚೀನಾವನ್ನು ಅವಲಂಬಿಸಿದೆ. ಆದರೆ, ಆಮದುಗಳು 50 ಕೋಟಿ ಡಾ.ಗಳಿಗೆ ಇಳಿದಿದೆ ಎಂದು ಚೀನಾದ ಅಧಿಕೃತ ಕಸ್ಟಮ್ಸ್ ದತ್ತಾಂಶಗಳು ತೋರಿಸಿವೆ.
ಪ್ರಸ್ತುತ ಉತ್ತರ ಕೊರಿಯಾದಲ್ಲಿನ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ದೇಶದಲ್ಲಿ ರೈತರಿಗೆ ರಸಗೊಬ್ಬರಗಳ ತಯಾರಿಕೆಗಾಗಿ ಪ್ರತಿದಿನ ಎರಡು ಲೀ. ಮೂತ್ರ ನೀಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಯುಎನ್ಎ ಆಹಾರ ಹಾಗೂ ಕೃಷಿ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಉತ್ತರ ಕೊರೊಯಾದಲ್ಲಿ 8,60,000 ಟನ್ ಆಹಾರದ ಕೊರತೆಯಿದೆ ಎಂದು ತಿಳಿಸಿದೆ.
ದೇಶದ ಆರ್ಥಿಕತೆ ಈ ವರ್ಷ ಸುಧಾರಿಸಿದೆ. ಆದರೂ ಕೂಡಾ ಹಲವು ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿ ಎದುರಾಗಿದೆ. ಕಳೆದ ವರ್ಷದ ನೆರೆಯಿಂದ ಕೃಷಿ ಕ್ಷೇತ್ರ ಉತ್ಪಾದನೆಯಲ್ಲಿ ವಿಫಲಗೊಂಡ ಕಾರಣ ಆಹಾರ ಸ್ಥಿತಿ ಗಂಭೀರವಾಗಿದೆ ಎಂದು ಕಿಮ್ ಹೇಳಿದ್ದನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಉತ್ತರ ಕೊರಿಯಾದಲ್ಲಿ ವೈದ್ಯಕೀಯ ಮೂಲಸೌಕರ್ಯಗಳು ಉತ್ತಮವಾಗಿಲ್ಲ. ಅಲ್ಲದೇ, ಔಷಧಿಗಳ ತೀವ್ರ ಕೊರೆತಯೂ ಇದೆ. ಈ ಹಿನ್ನೆಲೆ ಈ ದೇಶದಲ್ಲಿ ಕೊರೊನಾ ವೈರಸ್ ಹಾಹಾಕಾರ ಸೃಷ್ಟಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಉತ್ತರ ಕೊರಿಯಾವು 1990ರ ದಶಕದಲ್ಲಿ ಭೀಕರ ಕ್ಷಾಮಕ್ಕೆ ತುತ್ತಾಗಿದ್ದು, ಆಹಾರ ಕೊರತೆಯಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು.