ಡೊಮೆನಿಕಾ, ಜೂ 23 (DaijiworldNews/MS): ಪಲಾಯನಗೈದು ಡೊಮಿನಿಕಾದಲ್ಲಿ ಬಂಧಿತರಾಗಿರುವ ವಜ್ರವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಅಪಹರಣದ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ಹೇಳಿದ್ದಾರೆ.
ಮೆಹುಲ್ ಚೋಕ್ಸಿ ಅವರನ್ನು ಅಪಹರಿಸಲಾಗಿರುವ ಬಗ್ಗೆ ಅಲ್ಲಿನ ಸಂಸತ್ತಿನಲ್ಲಿ ಪ್ರಶ್ನಿಸಿದ ಪ್ರತಿಪಕ್ಷದ ಸಂಸದರು, 'ಸ್ಕಾಟ್ಲೆಂಡ್ ಯಾರ್ಡ್ ಅಥವಾ ಇನ್ನಾವುದೇ ತನಿಖಾ ಸಂಸ್ಥೆಯು ಚೋಕ್ಸಿ ಅವರನ್ನು ಡೊಮಿನಿಕಾಗೆ ಕರೆದೊಯ್ದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿವೆಯೇ' ಎಂದು ಕೇಳಿದ್ದರು.ಅದಕ್ಕೆ ಉತ್ತರಿಸಿರುವ ಅವರು,
ಅಪಹರಿಸಲಾಗಿದೆ ಎಂಬ ಮಾಹಿತಿಯು ಸಾರ್ವಜನಿಕ ವಲಯದಲ್ಲಿದೆ. ನಮಗೆ ಸಾಕ್ಷ್ಯಗಳ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ನಲ್ಲಿ ನಡೆದಿದ್ದ 13,500 ಕೋಟಿ ರೂ.ಗಳ ಹಗರಣವು ಭಾರತೀಯ ಬ್ಯಾಂಕಿಂಗ್ ಉದ್ಯಮವನ್ನು ಬೆಚ್ಚಿಬೀಳಿಸುವ ಮೊದಲು ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪರಾರಿಯಾಗಿದ್ದರು. ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದರು. ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು.