ಸ್ಪೇನ್, ಜೂ.24 (DaijiworldNews/HR): ಕಂಪ್ಯೂಟರ್ನ 'ಆಂಟಿ ವೈರಸ್ ತಯಾರಿಕೆ ಕ್ಷೇತ್ರದ ದಿಗ್ಗಜ, ಮೆಕಾಫೆ ಅಂಟಿವೈರಸ್ ಸಾಫ್ಟ್ವೇರ್ನ ಸಂಸ್ಥಾಪಕ ಜಾನ್ ಮೆಕಾಫೆ ಅವರು ಬಾರ್ಸಿಲೋನಾ ಸಮೀಪದ ಜೈಲಿನ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಾನ್ ಮೆಕಾಫೆ ಅವರನ್ನು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾಕ್ಕೆ ಗಡಿಪಾರು ಮಾಡಲು ಸ್ಪೇನ್ನ ನ್ಯಾಯಾಲಯವೊಂದು ಸಮ್ಮತಿ ಸೂಚಿಸಿದ ಗಂಟೆಗಳೊಳಗೆ ಈ ವಿದ್ಯಮಾನ ಬೆಳಕಿಗೆ ಬಂದಿದ್ದು, ಮೆಕಾಫೆ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ಇನ್ನು ಈಶಾನ್ಯ ಸ್ಪ್ಯಾನಿಷ್ ನಗರದ ಸಮೀಪವಿರುವ ಬ್ರಿಯಾನ್ಸ್ 2 ಸೆರೆಮನೆಯ ಭದ್ರತಾ ಸಿಬ್ಬಂದಿ ಜಾನ್ ಅವರಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಬದುಕಿಸಿಕೊಳ್ಳಳು ಪ್ರಯತ್ನಿಸಿದ್ದರೂ ಕೂಡ ಅಂತಿಮವಾಗಿ ಜೈಲಿನ ವೈದ್ಯಕೀಯ ತಂಡವು ಜಾನ್ ಮೃತಪಟ್ಟಿರುವುದನ್ನು ಖಚಿತಪಡಿಸಿತು ಎಂದು ಪ್ರಾದೇಶಿಕ ಕ್ಯಾಟಲಾನ್ ಸರ್ಕಾರದ ಹೇಳಿಕೆ ತಿಳಿಸಿದೆ.
ಸ್ಪೇನ್ ನ್ಯಾಷನಲ್ ಕೋರ್ಟ್ ಸೋಮವಾರ ನಡೆಸಿದ ವಿಚಾರಣೆಯಲ್ಲಿ, ಮೆಕಾಫೆ ಪರ ವಕೀಲರು, ತಮ್ಮ ಕಕ್ಷಿದಾರ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ರಾಜಕೀಯ ಪ್ರೇರಿತವಾಗಿದ್ದು,ಅಮೇರಿಕಾಕ್ಕೆ ಅವರು ಹಿಂದಿರುಗಿದರೆ ಮುಂದಿನ ಜೀವನವನ್ನು ಅವರು ಜೈಲಿನಲ್ಲೇ ಕಳೆಯಲಿದ್ದಾರೆ ಎಂದು ವಾದಿಸಿದ್ದರು. ಹೀಗಾಗಿ ನ್ಯಾಯಾಲಯವು ಮೆಕಾಫೆ ಅವರ ಗಡಿಪಾರಿಗೆ ಸಮ್ಮತಿ ಸೂಚಿಸಿ ತೀರ್ಪು ನೀಡಿತ್ತು.