ಲಂಡನ್, ಜೂ 26 (DaijiworldNews/MS): 'ತಾನು ಕೊರೊನಾಗೆ ಬಲಿಯಾದರೆ , ತನ್ನ ೫ ವರ್ಷದ ಪುಟ್ಟ ಕಂದ ತಾನಿಲ್ಲದೆ ಬದುಕು ಕಷ್ಟಸಾಧ್ಯವಾಗಬಹುದು ಎಂಬ ಭೀತಿಯಲ್ಲಿ ಆಕೆಯನ್ನು 15 ಬಾರಿ ಇರಿದು ಕೊಂದ ಘಟನೆ ಲಂಡನ್ ನಲ್ಲಿ ನಡೆದಿದೆ.
ಕಳೆದ ವರ್ಷದ ಜೂ.30ರಂದು ಈ ಘಟನೆ ನಡೆದಿದ್ದು, ಮಗಳನ್ನು ತಾನೇ ಇರಿದು ಕೊಂದಿದ್ದಾಗಿ 36 ವರ್ಷದ ಭಾರತೀಯ ಮಹಿಳೆ ಸುಥಾ ಶಿವನಾಥ್ ನ್ಯಾಯಲಯದ ಮುಂದೆ ಒಪ್ಪಿಕೊಂಡಿದ್ದಾಳೆ.
" ನನ್ನ ಪತ್ನಿಗೆ ಕೊವೀಡ್ ತಗಲುವ ಅವ್ಯಕ್ತ ಭಯ ಕಾಡಲಾರಂಭಿಸಿತು. ಜೊತೆಗೆ ಕೊರೊನಾ ಕಾರಣಕ್ಕಾಗಿ ದೇಶವ್ಯಾಪ್ತಿ ಹೇರಲಾಗಿದ್ದ ಲಾಕ್ ಡೌನ್ ಕೂಡಾ ಆಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆಕೆ ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣವಾಗಿರಬಹುದು ಎಂದು ಸುಥಾರ ಪತಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ದಿನ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ನನಗೂ ಕೆಲಸಕ್ಕೆ ಹೋಗದಂತೆ ಒತ್ತಾಯ ಮಾಡಿದ್ದಳು. ನಾನು ಸೂಪರ್ಮಾರ್ಕೆಟ್ಗೆ ಹೋಗಿದ್ದ ವೇಳೆ ಆಕೆ ಈ ಕೃತ್ಯವೆಸಗಿದ್ದಾಳೆ. ನೆರೆ ಮನೆಯವರು ಈ ಘಟನೆ ನೋಡಿ ನನಗೆ ಮಾಹಿತಿ ನೀಡಿದರು. ಮನೆಗೆ ತಲುಪಿದ ವೇಳೆ ಪುತ್ರಿ ಸಾವನ್ನಪ್ಪಿದ್ದಳು. ಆಕೆಯೂ ಗಂಭೀರ ಗಾಯಗಳಿಂದ ಬಳಲುತ್ತಿದ್ದು ಪತ್ನಿಯನ್ನು 2 ತಿಂಗಳ ಕಾಲ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡೆ" ಎಂದು ಶಿವನಾಥ್ ಹೇಳಿದ್ದಾರೆ.
ವಿವಾಹದ ಬಳಿಕ 2006 ರಿಂದ ಯುಕೆ ನಲ್ಲಿ ವಾಸಿಸುತ್ತಿದ್ದೇವೆ. ನಾವು ಸಂತೋಷದಾಯಕ ಮತ್ತು ತೃಪ್ತಿದಾಯಕ ಜೀವನ ನಡೆಸುತ್ತಿದ್ದೇವೆ. ಅದರೆ ಇದೀಗ ಕೆಲಸವನ್ನು ತ್ಯಜಿಸಬೇಕಾಗಿದೆ ಅಲ್ಲದೆ ಪ್ರತಿ ದಿನವೂ ಒಂದು ಹೋರಾಟವಾಗಿದೆ
ಘಟನೆ ನಡೆದ ಬಳಿಕ ಈ ವಿಚಾರವಾಗಿ ಹೆಂಡತಿಯೊಂದಿಗೆ ಮಾತನಾಡಿಲ್ಲ. ಆದರೆ ಕೃತ್ಯಕ್ಕೆ ಆಕೆ ಜವಬ್ದಾರಳಲ್ಲ. ಅವಳು ಚೆನ್ನಾಗಿರುತ್ತಿದ್ದರೆ ಅವಳು ನಮ್ಮ ಮಗಳನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ನನಗೆ ತಿಳಿದಿದೆ ಎಂದು ನೊಂದು ನುಡಿಯುತ್ತಾರೆ ಶಿವನಾಥ್.
ಕೊವೀಡ್-19 ಲಾಕ್ಡೌನ್ನಿಂದ ಉಂಟಾಗುವ ಸಾಮಾಜಿಕ ಪ್ರತ್ಯೇಕತೆ ಮತ್ತು ಒತ್ತಡವು ಸುಥಾ ಶಿವನಾಥ್ ಅವರ ಗಂಭೀರ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಿದೆ ಎಂದು ಚಿಕಿತ್ಸೆ ನೀಡಿದ ಮನೋವೈದ್ಯರು ಹೇಳಿದ್ದಾರೆ.