ವಿಶ್ವಸಂಸ್ಥೆ, ಜೂ.29 (DaijiworldNews/HR): ಭಯೋತ್ಪಾದಕ ಚಟುವಟಿಕೆಗಳಿಗಾಗಿ ಶಸ್ತ್ರಸಜ್ಜಿತ ಡ್ರೋನ್ಗಳ ಬಳಕೆ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ವ್ಯವಹಾರಗಳ ವಿಶೇಷ ಕಾರ್ಯದರ್ಶಿ ವಿ.ಎಸ್.ಕೆ.ಕೌಮುದಿ ಒತ್ತಾಯಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಲ್ಲಿನ ಭಯೋತ್ಪಾದಕ ನಿಗ್ರಹ ಸಂಸ್ಥೆಗಳ ಮುಖ್ಯಸ್ಥರ ಎರಡನೇ ಹಂತದ ಉನ್ನತ ಮಟ್ಟದ ಸಮಾವೇಶದಲ್ಲಿ 'ಭಯೋತ್ಪಾದನೆಯ ಜಾಗತಿಕ ಉಪದ್ರವ: ಹೊಸ ದಶಕಗಳಲ್ಲಿ ಪ್ರಸ್ತುತ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಬಳಸುತ್ತಿರುವ ಹೊಸ ವಿಧಾನಗಳ ಮೌಲ್ಯಮಾಪನ' ಕುರಿತು ಮಾತನಾಡಿದ ಅವರು, ಜಮ್ಮು ವಿಮಾನ ನಿಲ್ದಾಣದ ಬಳಿಯ ಭಾರತೀಯ ವಾಯುಪಡೆ ಕೇಂದ್ರಕ್ಕೆ ಎರಡು ಸ್ಫೋಟಕಗಳಿದ್ದ ಡ್ರೋನ್ಗಳು ದಾಳಿ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, "ಉಗ್ರ ಚಟುವಟಿಕೆಗಳಿಂದ ಈಗ ಸೃಷ್ಟಿಯಾಗಿರುವ ಚಿಂತೆಗಳ ಜತೆಗೆ, 'ಡ್ರೋನ್ಗಳ ಬಳಕೆ' ಹೊಸ ಸಮಸ್ಯೆಯಾಗಿ ಸೇರ್ಪಡೆಯಾಗಿದೆ" ಎಂದರು.
ಇನ್ನು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚಾರ ಮಾಡುವುದಕ್ಕಾಗಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಂತಹ ಸಂವಹನ ತಂತ್ರಜ್ಞಾನಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದ್ದು, ಉಗ್ರ ಚಟುವಟಿಕೆಗಳು ಮತ್ತು ಅವುಗಳಿಗೆ ಬೇಕಾದ ನೇಮಕಾತಿ, ಹೊಸ ಹಣ ಸಂಗ್ರಹ ವಿಧಾನಗಳು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡಲು 'ಕ್ರೌಂಡ್ ಫಂಡಿಂಗ್' ವೇದಿಕೆಗಳ ದುರ್ಬಳಕೆಯಾಗುತ್ತಿದೆ" ಎಂದು ಹೇಳಿದ್ದಾರೆ.