ಬೀಜಿಂಗ್ ಜು 01 (DaijiworldNews/MS): ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವವನ್ನು ಬೀಜಿಂಗ್ ನ ಟಿಯಾನನ್ಮೆನ್ ಸ್ಕ್ವೇರ್ನಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭ ದೇಶವನ್ನು ಉದ್ದೇಶಿಸಿ ಚೀನಾದ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ(ಸಿಪಿಸಿ) ಮುಖ್ಯಸ್ಥರು ಆಗಿರುವ ಕ್ಸಿ ಜಿನ್ಪಿಂಗ್ ಮಾತನಾಡಿದ್ದು. " ಯಾವುದೇ ವಿದೇಶಿ ಶಕ್ತಿಗಳು ಚೀನಾವನ್ನು ಪೀಡಿಸಲು ಮತ್ತು ಚೀನಿಯರ ಮೇಲೆ ದಬ್ಬಾಳಿಕೆ ನಡೆಸಲು ಅವಕಾಶ ನೀಡುವುದಿಲ್ಲ " ಎಂದು ಗುಡುಗಿದ್ದಾರೆ.
ಕಾರ್ಯಕ್ರಮದಲ್ಲು ಒಂದು ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಅವರು, ತೈವಾನ್ ಒಳಗೊಂಡಂತೆ ಅಖಂಡ ಚೀನಾ ರಚನೆ ನಮ್ಮ ಗುರಿ ಎಂದು ಘೋಷಿಸಿದ್ದು, ಚೀನಿಯರ ಸಾಮರ್ಥ್ಯದ ಬಗ್ಗೆ ರಿಗೂ ಅನುಮಾನ ಬೇಡ, ನಮ್ಮನ್ನು ಕೆಣಕಿದರೆ ತಕ್ಕ ಪಾಠ ಕಲಿಸುವ ತಾಕತ್ತು ನಮಗಿದೆ ಎಂದಿದ್ದಾರೆ.
ಯಾರೇ ಆಗಲಿ ನಮ್ಮನ್ನು ಮುಟ್ಟಲು ಬಂದರೆ ದೇಶದ 1.4 ಬಿಲಿಯನ್ ಚೀನಿಯರು ರಕ್ಷಾ ಕವಚವಾಗಲಿದ್ದಾರೆ ಎಂದ ಅವರು ನಾವು ದೇಶದ ರಕ್ಷಣೆಗಾಗಿ ನಮ್ಮ ಸೇನಾಬಲವನ್ನು ಆಧುನೀಕರಣಗೊಳಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಶತಮಾನೋತ್ಸವ ಕಾರ್ಯಕ್ರಮ ಬಾನಂಗಳದಲ್ಲಿ ವಿಮಾನಗಳಿಂದ ವಿವಿಧ ಕಸರತ್ತುಗಳ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಈ ಸಂಭ್ರಮಾಚರಣೆಯಲ್ಲಿ ಸೇನಾ ಪಥಸಂಚಲನ ಇಲ್ಲದಿದ್ದರೂ, ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಲಘು ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದರು.