ವಾಷಿಂಗ್ಟನ್, ಜು 03 (DaijiworldNews/PY): ಕಲ್ಪನಾ ಚಾವ್ಲಾ ಬಳಿಕ ಮತ್ತೋರ್ವ ಭಾರತೀಯ ಮೂಲದ ಮಹಿಳಾ ಗಗನಯಾತ್ರಿ ಅಂತರಿಕ್ಷ ಪ್ರಯಾಣ ಬೆಳಸಲು ತಯಾರಿ ನಡೆಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಅವರು ಬಾಹ್ಯಾಕಾಶಯಾನಕ್ಕೆ ಸಜ್ಜಾಗಿದ್ದಾರೆ. ಇವರು ಭಾರತ ಮೂಲದ ಎರಡನೇ ಮಹಿಳೆಯಾಗಿದ್ದು, ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ನಾಲ್ಕನೇ ಮಹಿಳಾ ಗಗನಯಾತ್ರಿ ಕೂಡಾ ಆಗಿದ್ದಾರೆ.
ವರ್ಜಿನ್ ಗೆಲಾಕ್ಟಿಕ್ನ ವಿಎಸ್ಎಸ್ ಯೂನಿಟಿ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು ಜನರ ಪೈಕಿ ಸಿರಿಶಾ ಅವರೂ ಕೂಡಾ ಒಬ್ಬರು. ಈ ಗಗನಯಾತ್ರಿಗಳು ಜುಲೈ 1ರಂದು ನಭಕ್ಕೆ ಜಿಗಿಯಲಿದ್ದು, ಇವರೊಂದಿಗೆ ಬಿಲಿಯನಿಯರ್ ರಿಚರ್ಡ್ ಬ್ರೋನ್ಸನ್ ಕೂಡ ಬಾಹ್ಯಾಕಾಶದಲ್ಲಿ ಪ್ರಯಾಣದಲ್ಲಿರಲಿದ್ದಾರೆ.
34 ವರ್ಷದ ಸಿರಿಶಾ ಅವರು ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್ ಇಂಜಿನಿಯರ್ ಪದವೀಧರೆಯಾಗಿದ್ದು, ಈ ಅವಕಾಶ ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ತಂಡದ ಯೋಜನೆಯ ಭಾಗವಾಗಿರುವುದು ಸಂತಸವಾಗಿದೆ. ಯುನಿಟಿ22 ಪಯಣದಲ್ಲಿ ಆರ ಮಂದಿಯ ಪೈಕಿ ನಾನು ಒಬ್ಬಳಾಗಿದ್ದೇನೆ. ಬಾಹ್ಯಾಕಾಶ ಎಲ್ಲ ಜನರಿಗೂ ಕೈಗೆಟುಕುವಂತಾಗಬೇಕು ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ" ಎಂದಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿರುವ ಸಿರಿಶಾ ಬಾಂಡ್ಲಾ ಬೆಳೆದಿದ್ದು ಟೆಕ್ಸಾಸ್ನ ಹೂಸ್ಟನ್ನಲ್ಲಿ. ಏರೋನಾಟಿಕಲ್ ಪದವೀಧರೆ ಆಗಿರುವ ಜಾರ್ಜ್ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ನಲ್ಲಿ 2015ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ಇದೇ ಕಂಪನಿಯಲ್ಲಿ ಅವರು ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್ನಲ್ಲಿ ಕೆಲಸ ಮಾಡುವ ಮುನ್ನ, ಅವರು ಟೆಕ್ಸಾಸ್ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ನಂತರ ಅವರು ಕಮರ್ಷಿಯಲ್ ಸ್ಪೇಸ್ ಫ್ಲೈಟ್ ಫೆಡರೇಶನ್ನಲ್ಲಿ ಬಾಹ್ಯಾಕಾಶ ನೀತಿಯಲ್ಲಿ ಕೆಲಸ ಪ್ರಾರಂಭಿಸಿದ್ದರು
ಇವರು ಬಾಹ್ಯಾಕಾಶ ನೌಕಾಯಾನ ಕೈಗೊಂಡ ಭಾರತ ಮೂಲದ ಎರಡನೇ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ. ಇದಕ್ಕೂ ಮುನ್ನ ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಂ ಅಂತರಿಕ್ಷಯಾನ ಕೈಗೊಂಡಿದ್ದರು.