ಇಸ್ಲಾಮಾಬಾದ್, ಜು.05 (DaijiworldNews/HR): ಮುಂಬೈಯಲ್ಲಿ 2008ರಲ್ಲಿ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ, ನಿಷೇಧಿತ ಜಮಾತ್ ಉದ್ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮನೆಯ ಹತ್ತಿರ ಕಳೆದ ತಿಂಗಳು ನಡೆದ ಸ್ಫೋಟದ ಹಿಂದೆ ಭಾರತೀಯ ನಾಗರಿಕನ ಕೈವಾಡವಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಆರೋಪಿಸಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಪಾಕಿಸ್ತಾನದ ಪಂಜಾಬ್ ಪೊಲೀಸ್ ಮುಖ್ಯಸ್ಥ ಇನಾಮ್ ಘಾನಿ ಹಾಗೂ ಮಾಹಿತಿ ಸಚಿವ ಫವಾದ್ ಚೌಧರಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂಸುಫ್, "ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವ ಭಾರತೀಯ ನಾಗರಿಕ ದಾಳಿಯ ಹಿಂದಿನ ಸೂತ್ರಧಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ.
ಇನ್ನು ಉಗ್ರರಿಂದ ವಶಪಡಿಸಿಕೊಂಡಿರುವ ವಿಧಿ ವಿಜ್ಞಾನದ ವಿಶ್ಲೇಷಣೆ, ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳ ಸಹಾಯದಿಂದ ದಾಳಿಯ ಹಿಂದಿನ ಮುಖ್ಯ ಮಾಸ್ಟರ್ ಮೈಂಡ್ ಯಾರೆಂಬುದು ಗುರುತಿಸಿದ್ದು, ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ. ಆತ ಭಾರತೀಯ ಗುಪ್ತಚರ ಇಲಾಖೆ 'ರಾ' (ಗುಪ್ತಚರ ಇಲಾಖೆ, ರಿಸರ್ಚ್ ಅನಾಲಿಸಿಸ್ ವಿಂಗ್, RAW)ಗೆ ಸೇರಿದ್ದು, ಆತ ಭಾರತೀಯ ಪ್ರಜೆ, ಭಾರತ ಮೂಲದವ ಎಂದಿದ್ದಾರೆ.