ಆಟಿಂಗೋವಾ, ಜು 07 (DaijiworldNews/PY): ಡೊಮಿನಿಕಾಗೆ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಧ್ಯಮಗಳು ವರದಿ ಮಾಡಿವೆ.
"ನನ್ನನ್ನು ಅಕ್ರಮ ಆರೋಪದಡಿ ಬಂಧಿಸಲಾಗಿದೆ. ಭಾರತ ಸರ್ಕಾರದ ಪ್ರತಿನಿಧಿಗಳ ನಿರ್ದೇಶನದ ಪ್ರಕಾರ ಈ ಕೆಲಸ ಮಾಡಲಾಗಿದೆ" ಎಂದು ಚೋಕ್ಸಿ ಆರೋಪಿಸಿದ್ದಾರೆ.
ಚೋಕ್ಸಿ ಅವರು, ಅಲ್ಲಿನ ವಿದೇಶಾಂಗ ಸಚಿವ, ಪೊಲೀಸ್ ಮುಖ್ಯಸ್ಥ ಹಾಗೂ ಪ್ರಕರಣದ ತನಿಖಾ ಅಧಿಕಾರಿಯ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
"ಪೊಲೀಸ್ ಮುಖ್ಯಸ್ಥ ಲಿಂಕನ್ ಕಾರ್ಬೆಟ್ ಹಾಗೂ ಪ್ರಕರಣದ ತನಿಖಾ ಅಧಿಕಾರಿ ಸಾರ್ಜೆಂಟ್ ಅಲ್ಲೆನ್ ಅವರು, ತನ್ನ ವಿರುದ್ಧ ಅಕ್ರಮ ಪ್ರವೇಶದ ಆರೋಪಗಳಡಿ ಪ್ರಕರಣ ದಾಖಲಿಸುವ ತೀರ್ಮಾನ ಸ್ವತಂತ್ರವಾಗಿ ಕೈಗೊಂಡಿದ್ದಲ್ಲ. ಭಾರತ ಸರ್ಕಾರದ ಪ್ರತಿನಿಧಿಗಳ ನಿರ್ದೇಶನದಂತೆ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.
"ನನ್ನ ವಿರುದ್ದ ಮಾಡಲಾಗಿರುವ ಅಕ್ರಮ ಪ್ರವೇಶದ ಆರೋಪಗಳಿಂದ ಕಾನೂನಿನ ಉಲ್ಲಂಘನೆಯಾಗಿದ್ದು, ಇದ್ದನ್ನು ರದ್ದುಗೊಳಿಸಬೇಕು. ನಾನು ಆಂಟಿಗುವಾ ಹಾಗೂ ಬಾರ್ಬುಡಾ ಪ್ರಜೆಯಾಗಿದ್ದು, ಕೆಲ ಭಾರತೀಯರು ಅಲ್ಲಿಂದ ನನ್ನನ್ನು ಅಪಹರಿಸಿ, ಡೊಮಿನಿಕಾಗೆ ಕರೆದುಕೊಂಡು ಬಂದಿದ್ದಾರೆ. ಈ ವಿಚಾರದ ಬಗ್ಗೆ ನಾನು ಪೊಲೀಸರಿಗೆ ತಿಳಿಸಿದ್ದರೂ, ಈ ಬಗ್ಗೆ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ" ಎಂದು ನ್ಯಾಯಾಲಯಕ್ಕೆ ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ. ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಭಾರತದಿಂದ 2018ರಿಂದ ಪರಾರಿಯಾಗಿದ್ದು, ಆಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಆಯಂಟಿಗಾದಿಂದ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಮೇ 26 ಡೊಮಿನಿಕಾ ದೇಶದಲ್ಲಿ ಬಂಧಿಸಲಾಗಿತ್ತು. ಇನ್ನು ಡೊಮಿನಿಕಾ ದೇಶದೊಳಗೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕೆ ಮೆಹುಲ್ ಚೋಕ್ಸಿಯನ್ನು ಆ ದೇಶದ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು. ಅವರನ್ನು ಡೊಮಿನಿಕಾದ ವಲಸೆ ಸಚಿವಾಲಯವು ನಿಷೇಧಿತ ವಲಸೆಗಾರ ಎಂದು ಘೋಷಿಸಿದೆ.