ಕೈರೊ, ಜು 08 (DaijiworldNews/PY): ಮೂರು ತಿಂಗಳ ಕಾಲ ಸುಯೆಜ್ ಕಾಲುವೆಯಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದ ಎವರ್ ಗಿವೆನ್ ಹಡಗು ಕೊನೆಗೂ ಬಂಧ ಮುಕ್ತವಾಗಿದೆ.
ಸುಯೆಜ್ ಕಾಲುವೆಯಲ್ಲಿ ಆರು ದಿನ ಸಿಲುಕಿಕೊಂಡಿದ್ದ ಎವರ್ ಗಿವನ್ ಹಡಗು ಓಡಾಟವನ್ನೇ ಬಂದ್ ಮಾಡಿತ್ತು. ಈ ಕಾರಣಕ್ಕೆ ಎವರ್ ಗಿವನ್ಗೆ 7 ಸಾವಿರ ಕೋಟಿ ರೂ. ದಂಡ ಕಟ್ಟಲು ಸುಯೆಜ್ ಕಾಲುವೆ ಪ್ರಾಧಿಕಾರ ಸೂಚನೆ ನೀಡಿತ್ತು. ಎವರ್ ಗಿವನ್ ಹಡಗು 2 ಲಕ್ಷ 24 ಸಾವಿರ ಟನ್ ಭಾರ ಹೊತ್ತು ಸುಯೆಜ್ ಕಾಲುವೆಯ ಮೇಲೆ ಸಂಚರಿಸುವ ವೇಳೆ ಭೀಕರ ಮರಳು ಮಿಶ್ರಿತ ಬಿರುಗಾಳಿ ಎದ್ದಿತ್ತು.
2 ಲಕ್ಷ 24 ಸಾವಿರ ಟನ್ ಭಾರ ಹೊತ್ತಿದ್ದ 'ಎವರ್ ಗಿವನ್' ಹಡಗು, ಸೂಯೆಜ್ ಕಾಲುವೆ ಮೇಲೆ ಸಂಚರಿಸು ಸಂದರ್ಭ ಭೀಕರ ಮರಳು ಮಿಶ್ರಿತ ಬಿರುಗಾಳಿ ಎದ್ದಿತ್ತು. ಈಜಿಫ್ಟ್ ಮರುಭೂಮಿ ಪ್ರದೇಶವಾದ ಕಾರಣ ಇಲ್ಲಿ ಮರಳಿನ ಚಂಡಮಾರುತ ಸಾಮಾನ್ಯವಾಗಿದೆ. ಈ ಸಂದರ್ಭ ಬಿರುಗಾಳಿ ತೀವ್ರವಾಗಿದ್ದು, ಹಾಗಾಗಿ ನಾವಿಕ ಹಡಗನ್ನು ಕಾಲುವೆ ಬದಿಗೆ ಹೊರಳಿಸಿದ್ದು, ಈ ಸಂದರ್ಭ ಹಡಗು ಮರಳಿನ ಮೇಲೆ ನಿಂತಿತ್ತು. ಈ ಕಾರಣದಿಂದ ಸುಮಾರು ಒಂದು ವಾರಗಳ ಕಾಲ 400ಕ್ಕೂ ಅಧಿಕ ಹಡಗುಗಳು ಸುಯೆಜ್ ಕಾಲುವೆಯ ಒಳಗೆ ಹಾಗೂ ಹೊರಗೆ ಹೋಗಲು ಕಾಯುತ್ತಿದ್ದವು.
ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯವಾಗಿದ್ದು, ಲಕ್ಷಾಂತರ ಕೋಟಿ ರೂ. ನಷ್ಟವಾಗಿತ್ತು. ಹಾಗಾಗಿ ಎವರ್ ಗಿವನ್ಗೆ 7 ಸಾವಿರ ಕೋಟಿ ರೂ. ದಂಡ ವಿಧಿಸಲಾಗಿತ್ತು. ಆದರೆ, ಪ್ರಾಧಿಕಾರ ಹಾಗೂ ಹಡಗಿನ ಮಾಲೀಕರು ಒಂದು ಒಪ್ಪಂದಕ್ಕೆ ಬಂದಿದ್ದು, ದಂಡದ ಮೊತ್ತದಲ್ಲಿ ವಿನಾಯಿತಿ ನೀಡಿ ಸುಯೆಜ್ ಕಾಲುವೆಯಿಂದ ಎವರ್ಗಿವನ್ ಹಡಗನ್ನು ಬಂಧ ಮುಕ್ತಗೊಳಿಸಿದ್ದಾರೆ.
ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹಡಗು ಸಿಲುಕಿಕೊಂಡ ಬಳಿಕ ಜಗತ್ತು ದೊಡ್ಡ ಪಾಠ ಕಲಿತಿದೆ. ಈ ನಡುವೆ ಪ್ರಾಧಿಕಾರ ಸುಯೆಜ್ ಕಾಲುವೆಯನ್ನು ಮತ್ತಷ್ಟು ಅಗಲ ಮಾಡಲು ಮುಂದಾಗಿದೆ. ಇದರ ಮೂಲಕ ಈಜಿಫ್ಟ್, ತನ್ನ ರಾಷ್ಟ್ರಕ್ಕೆ ಆದಾಯ ತರುತ್ತಿರುವ ಮುಖ್ಯ ಆದಾಯದ ಮೂಲ ಸುಯೆಜ್ ಕಾಲುವೆಯ ಘನತೆ ಉಳಿಸಲು ಸಜ್ಜಾಗಿದೆ.
2021ರ ಮಾರ್ಚ್ನಲ್ಲಿ ನಡೆದಿದ್ದ ಘಟನೆಯ ಬಳಿಕ ಸುಯೆಜ್ ಕಾಲುವೆ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಕಾಲುವೆ ಅಂಚನ್ನು ಅಗಲ ಮಾಡುತ್ತಿದೆ. ಸುಮಾರು 131 ಅಡಿಗಳಷ್ಟು ಕಾಲುವೆಯನ್ನು ಅಗಲ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಎವರ್ ಗಿವನ್ ಹಡಗು ಸಿಲುಕಿದ್ದ ಪ್ರದೇಶದ ಸುತ್ತಮುತ್ತ ಕಾಮಗಾರಿ ಆರಂಭವಾಗಲಿದೆ.