ವಾಷಿಂಗ್ಟನ್, ಜು 09 (DaijiworldNews/PY): "ಆಗಸ್ಟ್ 31ರಂದು ಅಫ್ಗಾನಿಸ್ತಾನದಿಂದ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುವ ಯೋಜನೆ ಪೂರ್ಣವಾಗಲಿದೆ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಈ ಬಗ್ಗೆ ಭಾಷಣ ಮಾಡಿರುವ ಅವರು, "ಆಗಸ್ಟ್ 31ರಂದು ಅಫ್ಗಾನಿಸ್ತಾನದಲ್ಲಿ ನಮ್ಮ ಮಿಲಿಟರಿ ಮಿಷನ್ ಪೂರ್ಣವಾಗಲಿದೆ. ಸುರಕ್ಷಿತ ಹಾಗೂ ಕ್ರಮಬದ್ಧವಾದ ರೀತಿಯಲ್ಲಿ ಸೇನೆ ಹಿಂತೆಗೆದುಕೊಳ್ಳುವ ರೀತಿಯಲ್ಲಿ ಮುಂದುವರಿಯುತ್ತದೆ. ಇದರೊಂದಿಗೆ ನಮ್ಮ ಸೈಮಿಕರ ಸುರಕ್ಷತೆಗೂ ಕೂಡಾ ಆದ್ಯತೆ ನೀಡಲಾಗಿದೆ. ಅಮೇರಿಕಾವು ಅಫ್ಗಾನಿಸ್ತನಾದಲ್ಲಿ ತನ್ನ ಗುರಿ ಸಾಧಿಸಿದೆ. ಸೇನೆಯನ್ನು ಹಿಂತೆಗೆದುಕೊಳ್ಳಲು ಇದು ಸೂಕ್ತ ಸಮಯ" ಎಂದು ತಿಳಿಸಿದ್ದಾರೆ.
"ಅಫ್ಗಾನಿಸ್ತಾನಕ್ಕೆ ನಾವು ದೇಶ ನಿರ್ಮಾಣ ಮಾಡಲು ಹೋಗಿಲ್ಲ. ಅಮೇರಿಕಾ ಸೇರಿದಂತೆ ವಿಶ್ವಕ್ಕೆ ಮಾರಕವಾಗಿರುವ ಭಯೋತ್ಪಾದಕರ ನಿರ್ಮೂಲನೆ ಮಾಡುವುದೇ ನಮ್ಮ ಗುರಿಯಾಗಿತ್ತು. ಅಫ್ಗಾನ್ ಭವಿಷ್ಯ ರೂಪಿಸುವುದು ಹಾಗೂ ದೇಶವನ್ನು ಯಾವ ರೀತಿ ನಡೆಸಬೇಕು ಎನ್ನುವ ಬಗ್ಗೆ ತೀರ್ಮಾನಿಸುವುದು ಆ ದೇಶದ ಜನರ ಹಕ್ಕು ಹಾಗೂ ಹೊಣೆ" ಎಂದಿದ್ದಾರೆ.
"ಎಲ್ಲಾ ಪಡೆಗಳನ್ನು ಅಮೇರಿಕಾ ಹಿಂತೆಗೆದುಕೊಳ್ಳುವುದರಿಂದ ಮತ್ತೊಮ್ಮೆ ಅಫ್ಗಾನಿಸ್ತಾನ ತಾಲಿಬಾನಿ ಭಯೋತ್ಪಾದಕರ ವಶವಾಗಲಿದೆ" ಎಂದು ಹೇಳಿದ್ದಾರೆ.
"ಅಫ್ಗಾನ್ ಸರ್ಕಾರ ಹಾಗೂ ಅಲ್ಲಿನ ನಾಯಕತ್ವ ಒಗ್ಗಟ್ಟಾಗಬೇಕು. ಅವರಿಗೆ ಸಾಮರ್ಥ್ಯ ಇದೆ ಎನ್ನುವುದು ಪ್ರಶ್ನೆಯಲ್ಲ. ಸರ್ಕಾರವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಅವರಿಗಿದೆ. ಅಫ್ಗಾನ್ಗೆ ಬೇಕಾದ ಎಲ್ಲಾ ಅಗತ್ಯವಾದ ನೆರವನ್ನು ನಾವು ಖಚಿತಪಡಿಸಲಿದ್ದೇವೆ" ಎಂದು ತಿಳಿಸಿದ್ದಾರೆ.