ಜಿನೆವಾ, ಜು 11 (DaijiworldNews/PY): "ವಿಶ್ವದಾದ್ಯಂತ ಹೆಚ್ಚಿನ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರಿ ಅಧಿಕ ಹರಡುತ್ತಿದೆ. ಇನ್ನೂ ಸಾಂಕ್ರಾಮಿಕ ರೋಗ ತಗ್ಗಿಲ್ಲ ಎನ್ನುವುದಕ್ಕೆ ಇದು ಸ್ಪಷ್ಟವಾದ ಪುರಾವೆಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ.
"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆಫ್ರಿಕಾದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಎರಡು ವಾರಗಳಲ್ಲಿ ಶೇ.30-40ರಷ್ಟು ಹೆಚ್ಚಿದೆ. ಡೆಲ್ಟಾ ರೂಪಾಂತರಿ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಲಸಿಕೆ ನೀಡುವಿಕೆಯ ಪ್ರಕ್ರಿಯೆ ನಿಧಾವಾಗುತ್ತಿರುವುದು ಹಾಗೂ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದು ಹೆಚ್ಚಾಗಿದೆ" ಎಂದಿದ್ದಾರೆ.
"ಕಳೆದ 24 ಗಂಟೆಗಳಲ್ಲಿ ಸುಮಾರು ಐದು ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸೋಂಕಿಗೆ ಸುಮಾರು 9,300 ಮಂದಿ ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕ ರೋಗ ಲಕ್ಷಣ ಕಡಿಮೆಯಾಗುತ್ತಿರುವ ಲಕ್ಷಣ ಇದಲ್ಲ" ಎಂದು ಹೇಳಿದ್ದಾರೆ.
"ಕೊರೊನಾ ಲಸಿಕೆಗಳನ್ನು ನೀಡುವಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ರಾಷ್ಟ್ರಗಳಲ್ಲಿ ರೋಗಿ ಗಂಭಿರ ಸ್ಥಿತಿಗೆ ತಲುಪುವ ಪ್ರಮಾಣವನ್ನು ಕಡಿಮೆಯಾಗಿಸಿದೆ. ಆಸ್ಪತ್ರೆಗೆ ದಾಖಲಾಗುವ ಹಾಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುವ ಪ್ರಮಾಣ ಇಳಿಕೆಯಾಗಿದೆ. ಆದರೆ, ವಿಶ್ವದ ಅಧಿಕ ಭಾಗಗಳಲ್ಲಿ ಆಕ್ಸಿಜನ್ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಕೆ ಕೊರತೆ ಇದೆ. ಅಲ್ಲದೇ, ಸಾವಿನ ಪ್ರಮಾಣವೂ ಕೂಡಾ ಹೆಚ್ಚಿದೆ" ಎಂದಿದ್ದಾರೆ.