ನ್ಯೂಯಾರ್ಕ್, ಜು 12 (DaijiworldNews/PY): "ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹಿಳೆಯನ್ನು ಒಂಟಿ ಮಾಡಲಾಗದು" ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ತಿಳಿಸಿದ್ದಾರೆ.
ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿರುವ ಅವರು, "ವಿಶ್ವ ಜನಸಂಖ್ಯಾ ದಿನದ ಗುರುತಾಗಿ ಪ್ರತಿಯೋರ್ವರು ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ ಪ್ರತಿಜ್ಞೆ ಮಾಡೋಣ" ಎಂದಿದ್ದಾರೆ.
"ಕೊರೊನಾ ಸೋಂಕು ವಿಶ್ವವನ್ನು ತೀವ್ರವಾಗಿ ಕಾಡುವುದನ್ನು ಮುಂದುವರಿಸಿದೆ. ಕೊರೊನಾದಿಂದ ಲಕ್ಷಾಂತರ ಜೀವಗಳು ಪ್ರಾಣಕಳೆದುಕೊಂಡಿವೆ. ಇದೀಗ ಕಡಿಮೆ ಸಾವಿನ ಪ್ರಕರಣಗಳು ಕಂಡುಬರುತ್ತಿವೆ. ಕೌಟುಂಬಿಕ ಹಿಂಸೆ ಪ್ರಕರಣಗಳು ಆಘಾತಕಾರಿ ಹೆಚ್ಚಳವಾಗಿರುವುದು, ಮಹಿಳೆಯರನ್ನು ಹಿಂಸಿಸುವ ಕಾರಣ ಬಲವಂತವಾಗಿ ಪ್ರತ್ಯೇಕವಾಗಿ ಉಳಿಯುವಂತೆ ಮಾಡಿದೆ. ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದೇ ಗರ್ಭನಿರೋಧಕ ಸೇವೆಗಳ ಬಳಕೆ ಹಾಗೂ ಮಾತೃತ್ವದ ಮುಂದೂಡಿಕೆಯ ಕಾರಣದಿಂದ ಹೆರಿಗೆ ವಾರ್ಡ್ಗಳು ಖಾಲಿಯಾಗಿವೆ" ಎಂದು ಹೇಳಿದ್ದಾರೆ.
"ಕೊರೊನಾ ಕಾರಣದಿಂದ 4.7 ಕೋಟಿ ಮಹಿಳೆಯರು ಹಾಗೂ ಮಕ್ಕಳು ತೀವ್ರ ಬಡತನದಲ್ಲಿ ಸಿಲುಕಿದ್ದಾರೆ. ಶಾಲೆಯಿಂದ ಹೊರನಡೆದ ಸಾಕಷ್ಟು ಹೆಣ್ಣುಮಕ್ಕಳು ವಾಪಾಸ್ಸಾಗುವುದಿಲ್ಲ" ಎಂದಿದ್ದಾರೆ.
"ಜಗತ್ತಿನ ಪ್ರತೀ ಮೂಲೆಯಲ್ಲಿ ಮಹಿಳೆಯರ ಕಷ್ಟದ ಗಳಿಕೆ, ಸಂತಾನೋತ್ಪತ್ತಿ ಹಕ್ಕುಗಳು ಹಾಗೂ ಆಯ್ಕೆಗಳು ಕುಸಿಯುತ್ತಿರುವುದು ಕಂಡುಬರುತ್ತಿದೆ. ಸಾಂಕ್ರಾಮಿಕದ ಪ್ರಾರಂಭದ ಜೊತೆಗೆ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಸಂಪನ್ಮೂಲಗಳು ದಿಕ್ಕುಗಳಲ್ಲಿ ಕೂಡಾ ಬದಲಾವಣೆಯಾಗಿದೆ" ಎಂದು ಹೇಳಿದ್ದಾರೆ.
ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 11ನ್ನು ವಿಶ್ವ ಜನಸಂಖ್ಯಾ ದಿನ ಎಂದು ಆಚರಣೆ ಮಾಡಲಾಗುತ್ತದೆ. 1989ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿಯು ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜನೆ ಮಾಡಿತ್ತು.